Site icon ಹರಿತಲೇಖನಿ

ಬೊಮ್ಮಾಯಿ ಪುತ್ರನಿಗೆ ಟಿಕೆಟ್.. ಕುಟುಂಬ ರಾಜಕಾರಣವಲ್ಲ – ಅರವಿಂದ ಬೆಲ್ಲದ್

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯದ ತೆರವಾಗಿರುವ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಿದಾಕ್ಷಣ ಕುಟುಂಬ ರಾಜಕಾರಣ ಎಂದು ಹೇಳಲು ಬರುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಪಕ್ಷದ ನಿರ್ಧಾರವಾಗಿದೆ. ಅಲ್ಲಿನ ನಾಯಕರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.

ರಾಜ್ಯದಿಂದ ಕಳುಹಿಸಿದ ಪಟ್ಟಿಯನ್ನು ಹೈಕಮಾಂಡ್ ಪರಿಗಣಿಸಿರಬಹುದು. ಉಪ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ನೀಡಿದಾಕ್ಷಣ ಕುಟುಂಬ ರಾಜಕಾರಣ ಎಂದು ಹೇಳಲು ಬರುವುದಿಲ್ಲ. ಗೆಲ್ಲುವುದು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕೋರ್ ಕಮಿಟಿಯಲ್ಲಿ ನಾನಿಲ್ಲದ ಕಾರಣ ಅಲ್ಲಿ ಏನು ಚರ್ಚೆಯಾಗಿದೆ. ಪಟ್ಟಿಯಲ್ಲಿ ಯಾರ ಹೆಸರಿತ್ತು ಎಂಬುವುದು ಗೊತ್ತಿಲ್ಲ. ಆದರೆ ರಾಜ್ಯ ನಾಯಕರು ಕಳುಹಿಸಿರುವ ಪಟ್ಟಿಯನ್ನೇ ಅಂತಿಮಗೊಳಿಸಿರುವ ಸಾಧ್ಯತೆಗಳಿವೆ ಎಂದರು.

ಅದೇ ರೀತಿ ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ ಅವರು ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಆ ಭಾಗದಲ್ಲಿ ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯೋಗೇಶ್ವರ ಅವರ ಶ್ರಮ ಹಾಗೂ ಪ್ರಯತ್ನ ಸಾಕಷ್ಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version