ಬೆಂಗಳೂರು: ತಂದೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಯುವತಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
19 ವರ್ಷದ ಶ್ರಾವ್ಯಾ ಡಿ. ಮೃತ ಯುವತಿ.
ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯಾ ಮನೆಯಲ್ಲಿ ಕೌಟುಂಬಿಕ ಜಗಳದ ವಿಚಾರವಾಗಿ ನೊಂದಿದ್ದಳು ಎನ್ನಲಾಗಿದೆ.
ಅಲ್ಲದೆ ಶುಕ್ರವಾರ ರಾತ್ರಿ ಮಲಗುವಾಗ ಬೆಡ್‌ಶೀಟ್ ವಿಚಾರಕ್ಕೆ ಶ್ರಾವ್ಯಾ ಹಾಗೂ ಸಹೋದರಿ ನಡುವೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ಶ್ರಾವ್ಯಾಗೆ ಅವರ ತಂದೆ ಬೈದು ಬುದ್ದಿವಾದ ಹೇಳಿದ್ದರು.
ಇದರಿಂದ ನೊಂದು ಶ್ರಾವ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ವರದಿ ಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪತಿಯಿಂದಲೇ ಪತ್ನಿಯ ಹತ್ಯೆ
ಬೆಂಗಳೂರು: ಪತಿಯಿಂದಲೇ ಪತ್ನಿ ಬರ್ಬರವಾಗಿ ಹತ್ಯೆಗೀಡಾದ ಘಟನೆ ಶುಕ್ರವಾರ ರಾತ್ರಿ ಬಾಗಲೂರು ಠಾಣೆ ವ್ಯಾಪ್ತಿಯ ಸಿಂಗೇನಹಳ್ಳಿಯಲ್ಲಿ ನಡೆದಿದೆ.
ಮಚ್ಚಿನಿಂದ ಹೊಡೆದು ಸುಧಾ ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಆರೋಪಿ ಪತಿ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಳಿ ಅಂಗಡಿ ನಡೆಸು ತ್ತಿದ್ದ ಶ್ರೀನಿವಾಸ್, ನಿತ್ಯ ಪಾನಮತ್ತನಾಗಿ ಪತ್ನಿ ಯೊಂದಿಗೆ ಗಲಾಟೆ ಮಾಡುತ್ತಿದ್ದ. ಗಂಡನ ಕಾಟಕ್ಕೆ ಬೇಸತ್ತ ಸುಧಾ, ಹೊಸಕೋಟೆಯಲ್ಲಿರುವ ತವರು ಮನೆ ಸೇರಿದ್ದಳು.
ಒಂದು ತಿಂಗಳ ಹಿಂದೆಯಷ್ಟೆ ಕುಟುಂಬದವರು ರಾಜಿ ಮಾಡಿದ ಬಳಿಕ ಗಂಡನ ಮನೆಗೆ ಮರಳಿದ್ದಳು. ಎರಡು ದಿನಗಳಿಂದ ಪುನಃ ಗಲಾಟೆ ಆರಂಭಿಸಿದ್ದ ಶ್ರೀನಿವಾಸ್, ತಡರಾತ್ರಿ ಕೋಳಿ ಕತ್ತರಿಸುವ ಮಚ್ಚಿನಿಂದ ಸುಧಾಳ ತಲೆ, ಕೈಗೆ ಹೊಡೆದು ಹತ್ಯೆಗೈದಿದ್ದಾನೆ.
ಈ ಬಗ್ಗೆ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.