ಆಂಧ್ರ ಪ್ರದೇಶ: ದೇಶದ ಸಂಪತ್ತು ಹೆಚ್ಚು ಮಕ್ಕಳಿದ್ದವರ ಪಾಲಾಗುತ್ತದೆ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಕುರಿತು ಪ್ರಧಾನಿ ಮೋದಿ ಅವರ ಹೇಳಿಕೆ ಬೆನ್ನಲ್ಲೇ, ಬಿಜೆಪಿ ಮಿತ್ರ ಪಕ್ಷದ ಟಿಡಿಪಿ ನೇತೃತ್ವದ ಸರ್ಕಾರ ಯುವಕರು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಕರೆ ಕೊಡುವ ಮೂಲಕ ಅಚ್ಚರಿ ಮೂಡಿಸಿದೆ.
ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು ಯುವಕರ ಸಂಖ್ಯೆ ಕ್ಷೀಣಿತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು, ಈ ಭಾಗದ ರಾಜ್ಯಗಳ ಯುವಕರು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಕರೆ ಕೊಟ್ಟಿದ್ದಾರೆ.
ಹೆಚ್ಚಿನ ಮಕ್ಕಳಿರುವ ಕುಟುಂಬಗಳನ್ನು ಪ್ರೋತ್ಸಾಹಿಸುವ ಕುರಿತು ನಾವು ಹೊಸ ಕಾನೂನನ್ನು ಜಾರಿಗೊಳಿಸಸಲು ಚಿಂತಿಸುತ್ತಿದ್ದೇವೆ. ಆ ಮೂಲಕ ಜನಸಂಖ್ಯೆ ನಿರ್ವಹಣೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆಂಧ್ರ ಸಿಎಂ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೇ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ಈ ಹಿಂದೆ ರಾಜ್ಯವು ಕಾನೂನು ರೂಪಿಸಿದ್ದನ್ನು ನಾವು ರದ್ದು ಮಾಡಿದ್ದೇವೆ ಎಂದಿದ್ದಾರೆ.
ಅಧಿಕ ಮಕ್ಕಳು ಹೊಂದುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಹೆಚ್ಚೆಚ್ಚು ಪ್ರಯೋಜನ ನೀಡುವ ಬಗ್ಗೆಯೂ ಚಿಂತಿಸುತ್ತಿದೆ ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು.