ಬೆಂಗಳೂರು: ರಾಜ್ಯ ಸರಕಾರದ ಮಹತ್ತ್ವಾಕಾಂಕ್ಷಿ ಯೋಜನೆಯಾಗಿರುವ ಕ್ವಿನ್ ಸಿಟಿ ಕುರಿತು ಆಸಕ್ತಿ ತಾಳಿ, ಇದರ ಬಗ್ಗೆ ಚೆನ್ನೈನಲ್ಲಿರುವ ಸಿಂಗಪುರದ ಕಾನ್ಸುಲ್ ಜನರಲ್ ಎಡ್ಗರ್ ಪ್ಯಾನ್ ಜತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಚರ್ಚಿಸಿರುವುದನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ವಾಗತಿಸಿದ್ದಾರೆ.
ಪ್ಯಾನ್ ಅವರೊಂದಿಗೆ ಕ್ವಿನ್ ಸಿಟಿ ಬಗ್ಗೆ ನಡೆಸಿದ ವಿಚಾರ ವಿನಿಮಯ ಕುರಿತು ತೇಜಸ್ವಿ ಎಕ್ಸ್’ನಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವರು,
ರಾಜ್ಯದ ಅಭಿವೃದ್ಧಿ ಮತ್ತು ಹಿತಾಸಕ್ತಿಗಳು ಚುನಾಯಿತ ಜನಪ್ರತಿನಿಧಿಗಳ ಮೊದಲ ಆದ್ಯತೆಯಾಗಿರಬೇಕು. ತೇಜಸ್ವಿ ಸೂರ್ಯ ಅವರು ತಮ್ಮ ಪಕ್ಷದ ಆಚೆಗೂ ಯೋಚಿಸಿ, ರಾಜ್ಯ ಸರಕಾರದ ಉಪಕ್ರಮಗಳನ್ನು ಸ್ವಾಗತಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ’ ಎಂದಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರಕಾರ ಎರಡರ ಪಾತ್ರವೂ ಇರುವ ಧಾರವಾಡದ ಬಿಎಂಐಸಿ ಯೋಜನೆಯನ್ನು ಸ್ವತಃ ತಾವು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಸರಕಾರದ ಮೊದಲ ಬಜೆಟ್ಟಿನಲ್ಲೇ ಮುಂದಕ್ಕೆ ಕೊಂಡೊಯ್ದೆವು. ತೇಜಸ್ವಿ ಅವರಂತೆಯೇ ರಾಜ್ಯದ ಉಳಿದ ಸಂಸದರು ಕೂಡ ಕೇಂದ್ರದಿಂದ ಹೆಚ್ಚಿನ ಯೋಜನೆಗಳನ್ನು ತರಬೇಕು. ಮುಖ್ಯವಾಗಿ ರಾಜ್ಯಕ್ಕೆ ಒಂದಾದರೂ ಸೆಮಿಕಂಡಕ್ಟರ್ ಯೋಜನೆಯ ತುರ್ತಿದೆ. ಈ ಯೋಜನೆಗೆ ಗುಜರಾತಿನಂತೆಯೇ ನಾವೂ ಸಹ ಎಲ್ಲ ಬಗೆಯ ಸಹಕಾರ ಮತ್ತು ಹಣಕಾಸು ನೆರವು ನೀಡಲು ಸಿದ್ಧರಿದ್ದೇವೆ ಎಂದು ಅವರು ಒತ್ತಾಯಿಸಿದ್ದಾರೆ.
Had a wonderful discussion with Mr Edgar Pan, Consul-General of Singapore in Chennai, and Ms Vaishnavi, Consul (Political), on the upcoming KWIN City project near Bengaluru.
— Tejasvi Surya (@Tejasvi_Surya) October 18, 2024
The Knowledge, Wellbeing & Innovation (KWIN) City aims to attract leading global educational… pic.twitter.com/qlrPbJLHlj
ತೇಜಸ್ವಿ ಅವರು ತಮ್ಮ `ಎಕ್ಸ್’ ಸಂದೇಶದಲ್ಲಿ, ನಗರ ವಿನ್ಯಾಸ, ಸಾರಿಗೆ, ತ್ಯಾಜ್ಯ ಮತ್ತು ನೀರಿನ ನಿರ್ವಹಣೆಯಲ್ಲಿ ಸಿಂಗಪುರ ಪರಿಣತಿ ಹೊಂದಿದೆ. ಇದು, ಕ್ಷಿಪ್ರವಾಗಿ ನಗರೀಕರಣವನ್ನು ಕಾಣುತ್ತಿರುವ ಭಾರತದ ನೆರವಿಗೆ ಬರಲಿದೆ. ಕ್ವಿನ್ ಸಿಟಿ ಯೋಜನೆಯಿಂದ ಬೆಂಗಳೂರಿನ ಸುತ್ತಮುತ್ತ ಬಂಡವಾಳ ಹೂಡಿಕೆ ಉತ್ತೇಜನ ಸಿಗಲಿದೆ.
ಜತೆಗೆ ಜಾಗತಿಕ ಮಟ್ಟದ ಕೈಗಾರಿಕೆಗಳು, ಸಂಶೋಧನಾ ಕೇಂದ್ರಗಳು ಮತ್ತು ಆಸ್ಪತ್ರೆಗಳು ಬರಲಿದೆ. ಎಡ್ಗರ್ ಅವರೊಂದಿಗಿನ ಚರ್ಚೆಯಲ್ಲಿ ಎರಡೂ ದೇಶಗಳ ನಡುವಿನ ಸಹಭಾಗಿತ್ವ ಮತ್ತು ಪರಸ್ಪರ ಕಲಿಕೆ ಕುರಿತೂ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.