ಬೆಂಗಳೂರು: ಮುಡಾ ಪ್ರಕರಣದಲ್ಲಿ ED ದಾಳಿ ರಾಜಕೀಯ ಪ್ರೇರಿತವಾಗಿದೆ. ರಾಜಕೀಯವಾಗಿರುವ ಬೆದರಿಕೆ ತಂತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಹೆದರುವುದಿಲ್ಲ ಎಂದು ಮಾಜಿ ಸಂಸದ ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಸರ್ಕಾರ, ನಾಯಕತ್ವವನ್ನು ಮಾಡಲು ಕೇಂದ್ರ ಸರ್ಕಾರ ಸಿಬಿಐ, ಐಡಿ, ಐಟಿ ಸಂಸ್ಥೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಇದೆಲ್ಲ ರಾಜಕೀಯ ಪ್ರಕರಣವಾಗಿದ್ದು, ರಾಜಕೀಯವಾಗಿ ಬೆದರಿಸುವ ತಂತ್ರವನ್ನು ಮಾಡುತ್ತಿದೆ ಎಂದರು.
ಮುಡಾ ಪ್ರಕರಣದಲ್ಲಿ ED ದಾಳಿ ರಾಜಕೀಯ ಪ್ರೇರಿತವಾಗಿದೆ. ರಾಜಕೀಯವಾಗಿ ಬೆದರಿಕೆ ತಂತ್ರಗಳಿಗೆ ಮುಖ್ಯಮಂತ್ರಿಗಳಾದ ಶ್ರೀ @siddaramaiah ಹಾಗೂ ರಾಜ್ಯ ಸರ್ಕಾರ ಹೆದರುವ ಅಗತ್ಯವಿಲ್ಲ! #Siddaramaiah #MUDA pic.twitter.com/6TwWPoKmzq
— DK Suresh (@DKSureshINC) October 18, 2024
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಂಸದರು ಉತ್ತರಿಸಿದ ಅವರು, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷವು ಗೆಲ್ಲುವ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದರು.
ನಾವು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ. ನಿರಂತರವಾಗಿ ಎರಡು ಮೂರು ದಿನ ಚರ್ಚೆ ನಡೆಸಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚನ್ನಪಟ್ಟಣ ಉಪಚುನಾವಣೆ ವೇಳೆ ಅಭ್ಯರ್ಥಿ ಬಗ್ಗೆ ಕೇಳಿದಾಗ, ನಾಮಪತ್ರ ಸಲ್ಲಿಕೆ ಮಾಡಲು ಇನ್ನೂ 25ನೇ ತಾರೀಕಿನವರೆಗೂ ಸಮಯವಿದೆ ಎಂದರು. ನನಗೆ ಜನ ವಿಶ್ರಾಂತಿ ನೀಡಿದ್ದು, ನಾನು ವಿಶ್ರಾಂತಿಯಲ್ಲಿದ್ದೇನೆ. ನನ್ನ ಆಚಾರ, ವಿಚಾರ, ಅಭಿಪ್ರಾಯವನ್ನು ನಾನು ಪಕ್ಷಕ್ಕೆ ತಿಳಿಸಿದ್ದೇನೆ ಎಂದರು.
ಅಚ್ಚರಿ ಅಭ್ಯರ್ಥಿ ಮೈತ್ರಿಕೂಟದಿಂದ ಬಂಡಾಯ ಎದ್ದು ಬರುವ ಅಭ್ಯರ್ಥಿಯಾಗಿರಬಹುದೇ ಎಂದು ಕೇಳಿದಾಗ, ಅವರಿಗೂ ನಮಗೂ ಸಂಬಂಧವಿಲ್ಲ. ಮೈತ್ರಿಕೂಟದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರು ಸಿಡಿದೇಳುತ್ತಾರೆ, ಅವರ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ ಎಂದರು.
ನಮ್ಮ ಪಕ್ಷದ ಸಂಘಟನೆ, ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಕಾರ್ಯಕರ್ತರ ವಿಚಾರದ ಬಗ್ಗೆ ಮಾತ್ರ ನಾವು ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ತಿಂಗಳಿಂದ ಉಪಮುಖ್ಯಮಂತ್ರಿಗಳು, ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿ ಚನ್ನಪಟ್ಟಣಕ್ಕೆ ಹೊಸ ದಿಕ್ಕು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.