ಒಂದೂರಿನಲ್ಲಿ ಒಬ್ಬ ಬೇಟೆಗಾರನಿದ್ದ. ಅವನು ಕಾಡಿನಲ್ಲಿ ಹಕ್ಕಿಗಳನ್ನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದ. ಪ್ರತಿಸಲ ಪರಿವಾಳ, ಗಿಳಿಗಳು ಮುಂತಾದ ಹಕ್ಕಿಗಳನ್ನು ಹಿಡಿದು ಮಾರಿ ಬೇಜಾರಾಗಿದ್ದ ಅವನೊಮ್ಮೆ ವಿಶೇಷ ಹಕ್ಕಿಯನ್ನು ಹಿಡಿದು ಮಾರಿ ಅಧಿಕ ಹಣ ಸಂಪಾದಿಸಬೇಕೆಂದು ಅಂದುಕೊಂಡ.
ಹಕ್ಕಿ ಹಿಡಿಯಲು ಹೊರಟವನು ವಿಶೇಷವಾದ ಹಕ್ಕಿ ಹಿಡಿಯಬೇಕೆಂಬ ಛಲದಿಂದ ದಟ್ಟ ಕಾಡಿನಲ್ಲಿ ತುಂಬಾ ದೂರದವರೆಗೂ ಹೋದ. ದಾರಿಯಲ್ಲಿ ಅವನಿಗೆ ಪಾರಿವಾಳ, ಗಿಳಿಗಳು ಎದುರಾದರೂ ಅವುಗಳನ್ನು ಹಿಡಿಯದೆ ಕಾಡಿನೊಳಕ್ಕೆ ಹೋಗುತ್ತಲೇ ಇದ್ದನು.
ಆಗ ಅವನಿಗೆ ವಿಶೇಷ ಧ್ವನಿಯಲ್ಲಿ ಕೂಗುತ್ತಿದ್ದ ಹಕ್ಕಿಯ ಕೂಗು ಕೇಳಿಸಿತು. ಅದು ಟುವ್ವಿ ಟುವ್ವಿ ಟುವ್ವಿ ಎಂದು ಇಂಪಾಗಿ ಹಾಡುತ್ತಿತ್ತು. ಒಹ್! ಎಂಥ ಮಧುರ ಧ್ವನಿ ಎಂದುಕೊಂಡ ಆತ. ಅವನು ಅಲ್ಲಿಯವರೆಗೂ ಆ ಥರದ ಧ್ವನಿಯ ಹಕ್ಕಿಯನ್ನು ನೋಡಿಯೇ ಇರಲಿಲ್ಲ. ಇದರ ಧ್ವನಿಯೇ ಇಷ್ಟು ದೊಡ್ಡದಿದೆ. ಇನ್ನು ಹಕ್ಕಿ ಇನ್ನೆಷ್ಟು ದೊಡ್ಡದಿರಬೇಡ? ಇವತ್ತು ನನಗೆ ಅದೃಷ್ಟ ಖುಲಾಯಿಸಿತು. ಹೇಗಾದರೂ ಆ ಹಕ್ಕಿಯನ್ನು ಹಿಡಿದು ಹೆಚ್ಚಿನ ಬೆಲೆಗೆ ಮಾರಬೇಕೆಂದು ಆತ ನಿರ್ಧರಿಸಿದ.
ಆ ಧ್ವನಿ ಬಂದ ಕಡೆಯೇ ಬೇಟೆಗಾರ ನಿಧಾನವಾಗಿ ಹೋಗಲಾರಂಭಿಸಿದ. ಹೋಗುತ್ತಾ ಹೋಗುತ್ತಾ ಧ್ವನಿ ಇನ್ನಷ್ಟು ಹತ್ತಿರವಾಗುತ್ತಾ ಬಂತು. ಧ್ವನಿ ಬರುತ್ತಿದ್ದ ದಿಕ್ಕಿನಿಂದ ಹಕ್ಕಿ ಇಷ್ಟೇ ದೂರದಲ್ಲಿರಬಹುದೆಂದು ಆತ ಅಂದಾಜಿಸಿದ್ದ. ಧ್ವನಿಯನ್ನೇ ಹಿಂಬಾಲಿಸಿದವನಿಗೆ ಒಂದು ಪೊದೆ ಕಾಣಿಸಿತು. ಹಕ್ಕಿಯ ಧ್ವನಿ ಅಲ್ಲಿಂದಲೇ ಬರುತ್ತಿತ್ತು. ಸರಿ ಇಲ್ಲೇ ಇದೆ ಹಕ್ಕಿ ಎಂದು ಮೆಲ್ಲಗೆ ಹೋಗಿ ಬಲೆ ಬೀಸಿದ.
ನಿಧಾನವಾಗಿ ಬಲೆ ಎಳೆದುಕೊಂಡವನಿಗೆ ಆಶ್ಚರ್ಯ ಕಾದಿತ್ತು. ದೊಡ್ಡ ಬಲೆಯಲ್ಲಿ ಒಂದು ಸಣ್ಣ ಹಕ್ಕಿ ಸಿಕ್ಕಿತ್ತು. ಅಯ್ಯೋ ನನ್ನ ಬುದ್ಧಿಗೆ ಏನೆನ್ನಬೇಕು, ಧ್ವನಿ ದೊಡ್ಡದಿದ್ದರೆ ಹಕ್ಕಿಯೂ ದೊಡ್ಡದಿರಬಹುದೆಂದು ತಿಳಿದೆನಲ್ಲ. ದೊಡ್ಡ ಧ್ವನಿಯ ಚಿಕ್ಕ ಹಕ್ಕಿ ಹಿಡಿದೆನಲ್ಲಾ. ಇವತ್ತು ನಾನು ಮೋಸ ಹೋದೆ. ಇನ್ನು ಮುಂದೆ ಹೀಗೆ ಧ್ವನಿಯ ಬೆನ್ನತ್ತಿ ಹೋಗಬಾರದೆಂದು ತೀರ್ಮಾನಿಸಿದ.
ಆಗಲೇ ಕತ್ತಲಾಗುತ್ತಾ ಬಂದಿದ್ದರಿಂದ ಬರಿಗೈಯಲ್ಲಿ ಮನೆಗೆ ಹಿಂದಿರುಗಿದ. ಕೇಳಿದ್ದು, ನೋಡಿದ್ದು ಕೆಲವೊಮ್ಮೆ ಸುಳ್ಳಾಗಬಹುದು. ನಿಧಾನವಾಗಿ ಯೋಚಿಸಿದರೆ ನಿಜದ ಅರಿವಾಗುವುದು ಎಂಬುದೇ ಈ ಕಥೆಯ ನೀತಿ.
ಆಧಾರ: ಪ್ರಕಾಶ್.ಕೆ.ನಾಡಿಗ್