ಬಂಟ್ವಾಳ: ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ರಾಜ್ಯ ಸರಕಾರದ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸರಕಾರವನ್ನು ವಜಾಗೊಳಿಸುವುದಕ್ಕಾಗಿ ಬಿಜೆಪಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಮನವಿ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ( Vijayendra) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರಕಾರ ಅವ್ಯಾಹತವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ದಲಿತರ ಅಭಿವೃದ್ಧಿಗಾಗಿ ಮೀಸಲಿಡಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡು ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣ ನಡೆದಿರುವುದನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸುತ್ತಲೇ ಬಂದಿರುವ ಸಿದ್ದರಾಮಯ್ಯ ಈಗ ನಿವೇಶನ ವಾಪಸ್ ಕೊಡಿಸುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ 25ಕ್ಕೆ ಪ್ರತಿಭಟನೆ: ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಆರೋಪಗಳನ್ನು ಹಿಂಪಡೆದಿರುವುದನ್ನು ವಿರೋಧಿಸಿ ಅ. 25ರಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ಎನ್ ಐಎ ಪ್ರಕರಣದ ತನಿಖೆ ನಡೆಸಿದ್ದು, ಇಂತಹ ಗಲಭೆಕೋರರ ವಿರುದ್ಧ ಆರೋಪ ವಾಪಸ್ ಪಡೆದಿದ್ದು ತಪ್ಪು ಎಂದು ವಿಜಯೇಂದ್ರ ಖಂಡಿಸಿದರು.