ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಪಿಎಸ್‍ಐ ಜಗದೀಶ್ ವೃತ್ತದಲ್ಲಿಂದು ಹುತಾತ್ಮ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ದಿ.ಜಗದೀಶ್ ಅವರ 09ನೇ ವರ್ಷದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್ಐ ಕೃಷ್ಣಪ್ಪ, ಎಎಸ್ಐ ಕೃಷ್ಣಮೂರ್ತಿ ಪೇದೆಗಳಾದ ಪಾಂಡುರಂಗ, ಪ್ರಕಾಶ್ ಹಾಗೂ ಯೋಗಶ್ರೀ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ, ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಅಗಲಿಕೆಯನ್ನು ಒಂಬತ್ತು ವರ್ಷಗಳಿಂದ ಸ್ಮರಿಸುತ್ತಾ ಇರುವುದು ಪ್ರತಿಯೊಬ್ಬ ಪೊಲೀಸರಿಗೆ ಪ್ರೇರಣೆ.
ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹ ವಿಶ್ವಾಸದಿಂದಿರಲು ಬಯಸುತ್ತಾರಾದರೂ.. ಅಪರಾಧ ಮನಸ್ಥಿತಿಯವರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಕಾರಣ, ತುಸು ಕಠೋರವಾಗಿ ವರ್ತಿಸಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿದೆ. ಉತ್ತಮ ಸೇವೆ ಸಲ್ಲಿಸುವ ವ್ಯಕ್ತಿ ಸಾವಿನ ನಂತರವು ಜೀವಂತವಾಗಿರುವುದಕ್ಕೆ ಜಗದೀಶ್ ಅವರು ಸಾಕ್ಷಿ ಎಂದರು.
ಪಿಎಸ್‌ಐ ಜಗದೀಶ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ರಾಜಘಟ್ಟ ರವಿ ಮಾತನಾಡಿ, ಜಗದೀಶ್ ಅವರ ಹೆಸರಲ್ಲಿ ಫೌಂಡೇಶನ್ ಸ್ಥಾಪಿಸಿರುವುದು ಕೇವಲ ಜನ್ಮದಿನ ಆಚರಣೆ, ಹುತಾತ್ಮ ದಿನಾಚರಣೆ, ಪ್ರತಿಮೆ ಸ್ಥಾಪನೆಗೆ ಸೀಮಿತವಲ್ಲ.
ಫೌಂಡೇಷನ್ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕಲಿಕಾ ಕೇಂದ್ರ ಸ್ಥಾಪನೆ, ಅವರಿಗಾಗಿ ಉಚಿತ ಗ್ರಂಥಾಲಯ ಸ್ಥಾಪನೆ ಸೇರಿದಂತೆ ಜನಪರ ಉದ್ದೇಶವನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಭಾ ರಾಥೋಡ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್, ನಗರ ಠಾಣೆಯ ಪಂಕಜ, ಕಂಟನ ಕುಂಟೆ ಕೃಷ್ಣ ಮೂರ್ತಿ, ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್, ಜಗದೀಶ್ ಫೌಂಡೇಶನ್ ಟ್ರಸ್ಟ್ ಉಪಾಧ್ಯಕ್ಷ ಪರಮೇಶ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹ ಮೂರ್ತಿ, ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಸುಕಜವೇ ರಾಜ್ಯ ಸಂ.ಕಾರ್ಯದರ್ಶಿ ಚಂದ್ರಪ್ಪ, ಮಂಜುನಾಥ್ ಸೇರಿದಂತೆ ಜಗದೀಶ್ ಕುಟುಂಬದ ಸದಸ್ಯರು ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.