ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಕಾಲರ್‌ಶಿಪ್ ಸ್ಕೀಂ (ವಿದ್ಯಾರ್ಥಿವೇತನ ಯೋಜನೆ)ಯನ್ನು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದರು.
ನಗರ ಹೊರವಲಯದ ತಮ್ಮ ಗೃಹಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಸ್‌ಎಸ್‌ಎಲ್‌ಸಿ, ದ್ವೀತಿಯ ಪಿಯುಸಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಅಂತಿಮ ವರ್ಷದ ಪಿಜಿ, ಐಟಿಐ, ಡಿಪ್ಲೋಮಾ, ಡಿಎಡ್, ಬಿಎಡ್, ಇಂಜನಿಯರಿಂಗ್ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿರುವುದಾಗಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ 1,000 ರೂ , ಡಿಪ್ಲೋಮೋ-ಐಟಿಐ ವಿದ್ಯಾರ್ಥಿಗಳಿಗೆ ತಲಾ 1,500 ರೂ, ದ್ವೀತಿಯ ಪಿಯುಸಿ, ಡಿಎಡ್ ವಿದ್ಯಾರ್ಥಿಗಳಿಗೆ ತಲಾ 2,000 ರೂ , ಪದವಿ,ಬಿಎಡ್, ಪಿಜಿ, ಇಂಜನಿಯರಿಂಗ್ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ತಲಾ 3,000 ರೂ. ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಿದ್ದಾರೆ.
ಹೀಗಾಗಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳು ಶಾಸಕ ಪ್ರದೀಪ್ ಈಶ್ವರ್ ವೆಬ್ ಸೈಟ್‌ನಲ್ಲಿ ತಮ್ಮ ಹೆಸರನ್ನ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಕ್ಯೂಆರ್ ಕೋಡ್ ಇರುವ ಸ್ಕ್ಯಾನರ್ ಸಿದ್ದಪಡಿಸಲಾಗಿದೆ, ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ನೊಂದಣಿ ಮಾಡಿಕೊಳ್ಳಿ, ಯಾವುದೇ ಭೌತಿಕ ದಾಖಲಾತಿಗಳನ್ನು ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೂ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಬ್ಯಾಂಕಿನ ಬ್ಯಾಲೆನ್ಸ್ ನೋಡಿದಾಗ ಸಿಗುವ ಖುಷಿಗಿಂತ, ಬಡ ಮಕ್ಕಳ ಮುಖದಲ್ಲಿ ಮಂದಹಾಸ ಕಂಡಾಗ ಸಿಗುವ ಖುಷಿಗೆ ವ್ಯಾಲಿಡಿಟಿ ಜಾಸ್ತಿ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಬೆಳೆದವನು ನಾನು. ಅನ್ನ ಮತ್ತು ಅಕ್ಷರದ ಬೆಲೆ ಅರಿತವನು, ಕ್ಷೇತ್ರದ ಜನತೆಯ ಅಶೀರ್ವಾದದಿಂದ ವಿಧಾನಸೌಧ ತಲುಪಿದವನು. ಆಸ್ತಿ – ಅಂತಸ್ತಿನ ಮೇಲೆ ವ್ಯಾಮೋಹ ಕಡಿಮೆ. ನನಗೇನೂ ಹಣ ಹೆಚ್ಚಾಗಿ ಈ ಕಾರ್ಯಗಳನ್ನು ಮಾಡುತ್ತಿಲ್ಲಾ. ಇಂದಿಗೂ ನಾನು ತಿಂಗಳಾದರೆ ನನ್ನ ಕಾರಿನ ಇಎಂಐ ಕಟ್ಟಬೇಕು ಎಂದರು.
ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪದೆ ಜೀವ ಕಳೆದುಕೊಂಡವರು ನನ್ನ ತಂದೆ ಈಶ್ವರ್ ಮತ್ತು ನನ್ನ ಹೆತ್ತ ದೇವತೆ ಮಂಜುಳ. ನನ್ನ ಕುಟುಂಬಕ್ಕೆ ಬಂದ ಸ್ಥಿತಿ, ಯಾರಿಗೂ ಬರಬಾರದೆಂದು, “24×7” ಹತ್ತು ‘ಅಮ್ಮ ಆ್ಯಂಬುಲೆನ್ಸ್’ ಗಳು ಕ್ಷೇತ್ರದಲ್ಲಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿವೆ.
ಕಳೆದ ಎರಡು ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ನನ್ನ ತಾಯಂದಿರಿಗೆ ಅರಿಶಿನ-ಕುಂಕುಮ,ಬಳೆ, ಸೀರೆಗಳನ್ನು ಕೊಟ್ಟಿದ್ದೇನೆ. ಸರ್ಕಾರಿ ಶಾಲೆಯ 25,000 ಮಕ್ಕಳಿಗೆ ಮತ್ತು 5,000 ಅಂಗನವಾಡಿ ಮಕ್ಕಳಿಗೆ ಹಬ್ಬಕ್ಕೆ ಬಟ್ಟೆ ವಿತರಿಸಿದ್ದೇನೆ. ಮತ್ತೆ ದೀಪಾವಳಿಗೆ ಸರ್ಕಾರಿ ಶಾಲೆಯ 25,000 ಮಕ್ಕಳಿಗೆ ಮತ್ತು ಅಂಗನವಾಡಿಯ ಐದು ಸಾವಿರ ಮಕ್ಕಳಿಗೆ ಶಿವರಾತ್ರಿ ಹಬ್ಬಕ್ಕೆ ಬಟ್ಟೆ ವಿತರಿಸಲಿದ್ದೇನೆ ಎಂದರು.
ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ 1,000 ರೂ, ಇಂಜನಿಯರಿಂಗ್ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ತಲಾ 5,000 ರೂ. ಹಂಚಿಕೆ ಮಾಡಿದ್ದೇನೆ. ಈಗ ಮತ್ತೆ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಮಯ ಇದಾಗಿದೆ. ಇದು ಪ್ರತಿ ವರ್ಷ ಹೀಗೆ ಮುಂದುವರೆಯಲಿದೆ.
ಸಾಧ್ಯವಾದರೆ ಜನತೆಯ ಆಶೀರ್ವಾದ ಹೀಗೆ ಮುಂದುವರಿಯಲಿ ಎಂದರು.
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾರು ಅಂತ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿಲ್ಲ ಅದರೆ ಶಾಸಕ ಪ್ರದೀಪ್ ಈಶ್ವರ್ ಮಾತ್ರ ಡಿಕೆ ಸುರೇಶ್ ಅವರೇ ಸ್ಪರ್ಧಿಸಲಿ ಎನ್ನುತ್ತಿದ್ದಾರೆ. ಸುರೇಶ್ ಸ್ಪರ್ಧಿಸಿದರೆ ತಾನು ಮನೆ ಮನೆಗೆ ತೆರಳಿ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದರು.
ಡಿಕೆ ಸುರೇಶ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಇಲ್ಲದಿದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಬಹುದು. ಆದರೆ ಹೈಕಮಾಂಡ್ ಯಾರನ್ನೆ ಅಭ್ಯರ್ಥಿಯಾಗಿಸಲಿ ಅವರ ಗೆಲುವು ನಿಶ್ಚಿತ. ಏಕೆಂದರೆ ಜೆಡಿಎಸ್ ಬಿಜೆಪಿ ಒಳ ಜಗಳ ನಮಗೆ ಈ ಬಾರಿ ಅನುಕೂಲ ಆಗಲಿದೆ. ಸಿಪಿ ಯೋಗೇಶ್ವರ್ ವರ್ಸಸ್ ಎಚ್ ಡಿ ಕುಮಾರಸ್ವಾಮಿ ಒಳ ಜಗಳ ನಮಗೆ ಅನುಕೂಲ ಆಗಲಿದೆ.
ಚನ್ನಪಟ್ಟಣ ಕ್ಷೇತ್ರ ದಿಂದ ಹೆಚ್.ಡಿ.ಕುಮಾರಸ್ವಾಮಿಯರ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಯಾದರೆ, ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಕೆಲಸ ಮಾಡಲ್ಲ. ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾದರೆ ಹೆಚ್.ಡಿ.ಕುಮಾರಸ್ವಾಮಿಯವರು ಕೆಲಸ ಮಾಡಲ್ಲ. ಕಾಂಗ್ರೆಸ್ ವಿರುದ್ಧ ಇವರಲ್ಲಿ ಯಾರೇ ಅಭ್ಯರ್ಥಿ ಯಾದರೂ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದರು. ಜೆಡಿಎಸ್ ಬಿಜೆಪಿ ಒಳ ಜಗಳ ನಮಗೆ ಈ ಬಾರಿ ಅನುಕೂಲ ಆಗಲಿದೆ.
ಚನ್ನಪಟ್ಟಣ ಉಪಚುನಾವಣೆಗೆ ನನಗೂ ಉಸ್ತುವಾರಿ ಕೊಟ್ಟಿದ್ದಾರೆ. ಈ ಬಾರಿ ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಗೆಲ್ಲಲಿದ್ದಾರೆ. ಅವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಡಿಕೆ ಸುರೇಶಣ್ಣ ನಮ್ಮ ಜೊತೆ ವಿಧಾನಸೌಧಕ್ಕೆ ಬರ್ತಾರೆ ಎಂಬ ವಿಶ್ವಾಸವಿದೆ. ಅವರೇ ಅಭ್ಯರ್ಥಿಯಾದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.