ದೊಡ್ಡಬಳ್ಳಾಪುರ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ, ಅ.19 ರಂದು ಬೆಂಗಳೂರಿನಲ್ಲಿ ಬೆಂಗಳೂರು ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಮುಂಭಾಗದಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಜಾಗೃತ ವೇದಿಕೆ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನಾ ರ್ಯಾಲಿಯ ಕರಪತ್ರಗಳನ್ನು ಬಿಡುಗಡೆ ಮಾಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ 68 ವರ್ಷಗಳು ಕಳೆದಿದ್ದರೂ ಇನ್ನು ಅದರ ಆಶಯಗಳು ಈಡೇರಿಲ್ಲ. ಇಲ್ಲಿನ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಯಾವುದೇ ಖಾಸಗಿ ವಲಯದ ಉದ್ಯಮಗಳು ಪ್ರಾರಂಭಿಸಲು ನೀರು, ವಿದ್ಯುತ್ತು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತದೆ.
ಈ ನಾಡಿನ ರೈತರು ತಮ್ಮ ಭೂಮಿ ನೀಡಿರುತ್ತಾರೆ. ಆದರೆ ಸ್ಥಳೀಯರಿಗೆ ಉದ್ಯೋಗ ಮಾತ್ರ ದೊರೆಯುತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಳ ಹಂತದ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ಸೀಮಿತಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ,ದೂರವಾಣಿ ಇಲಾಖೆ, ಅಂಚೆ ಇಲಾಖೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಹ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ.
ಕನ್ನಡಿಗರನ್ನು ವಂಚಿಸಿ ಪರ ರಾಜ್ಯದವರಿಗೆ ಉದ್ಯೋಗ ನೀಡುವ ಯಾವುದೇ ಕಂಪನಿ ಕಾರ್ಖಾನೆ ಆದರೂ ಸರಿ, ಅವರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಹಾಗೂ ಪರವಾನಗಿಯನ್ನು ರದ್ದು ಮಾಡುವ ನಿರ್ಧಾರ ಸರ್ಕಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹಕ್ಕು ನಮ್ಮ ಉದ್ಯೋಗ ನಮ್ಮ ಅಸ್ತಿತ್ವ- ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ಧ್ಯೇಯದೊಂದಿಗೆ ಕನ್ನಡ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವಣ್ಣ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ಕನ್ನಡಪರ ಚಿಂತಕರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಕನ್ನಡ ಜಾಗೃತಿ ವೇದಿಕೆ ಹಿರಿಯ ಮುಖಂಡ ಎಚ್.ಎಸ್.ಅಗ್ನಿ ವೆಂಕಟೇಶ್, ತಾಲೂಕು ಅಧ್ಯಕ್ಷ ಶಶಿಧರ್.ಸಿ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್. ಕೆ.ಆರ್, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣ, ಶಿವಕುಮಾರ್, ತಾಲೂಕು ಮಹಿಳಾ ಉಪಾಧ್ಯಕ್ಷೆ ಮುನಿರತ್ನ , ಮುಖಂಡರಾದ ಗೌರಮ್ಮ, ಸದಸ್ಯರಾದ ಮೋಹನ್, ಲಿಂಗೇಶ್.ಪಿ, ಅಜಿತ್ ಕುಮಾರ್, ಹೇಮಂತ್ ಹಾಜರಿದ್ದರು.