ಮನೆ ಮಹಡಿಯ ಮೇಲೆ ತಿರುಗಾಡುತ್ತಿದ್ದ ಬೆಕ್ಕಿಗೆ ಅಲ್ಲಿಯೇ ಮೇಲೆ ಕುಳಿತಿದ್ದ ಕೊಕ್ಕರೆಯನ್ನು ಕಂಡು ಅದರೊಂದಿಗೆ ಸ್ನೇಹ ಮಾಡಲು ಮನಸ್ಸಾಯಿತು. ಕೊಕ್ಕರೆಯ ಬಳಿಗೆ ತೆರಳಿ ಅದು ತನ್ನ ಮನದಿಚ್ಛೆಯನ್ನು ಅರುಹಿತು.
ಕೊಕ್ಕರೆಯೂ ಮನ:ಪೂರ್ವಕವಾಗಿ ಸಮ್ಮತಿಸಿತು. ಪ್ರತಿದಿನವೂ ಸಾಯಂಕಾಲದ ಸಮಯದಲ್ಲಿ ಅವೆರಡೂ ಮನೆಯ ಮೇಲೆ ಸೇರಿ ಉಭಯ ಕುಶಲೋಪರಿ ಚರ್ಚಿಸತೊಡಗಿದವು. ಸ್ನೇಹ ಗಾಢವಾಗತೊಡಗಿತು.
ಕೊಕ್ಕರೆ ಹತ್ತಾರು ಕಡೆ ಸುತ್ತಾಡುತ್ತಿದ್ದುದರಿಂದ ಅದರ ಜ್ಞಾನ ಮತ್ತು ತಿಳುವಳಿಕೆ ಸ್ವಲ್ಪ ಹೆಚ್ಚಿತ್ತು. ಆದರೆ ಹುಟ್ಟಿದಾಗಿನಿಂದ ಒಂದೇ ಮನೆಯಲ್ಲಿದ್ದ ಬೆಕ್ಕಿಗೆ ಕೊಕ್ಕರೆಗಿಂತ ತಿಳುವಳಿಕೆ ಸ್ವಲ್ಪ ಕಮ್ಮಿ. ಅದರ ಬಗ್ಗೆ ಬೆಕ್ಕಿಗೆ ಸ್ವಲ್ಪ ಅಸಮಾಧಾನವಿತ್ತು. ಹೇಗಾದರೂ ಮಾಡಿ ಕೊಕ್ಕರೆಯ ಕಾಲು ಎಳೆಯಬೇಕೆಂದು ಅದು ಸಮಯಕ್ಕಾಗಿ ಹೊಂಚು ಹಾಕುತ್ತಿತ್ತು.
ಒಮ್ಮೆ ಬೆಕ್ಕಿನ ಯಜಮಾನ ತನ್ನೆಲ್ಲಾ ಕುಟುಂಬಸ್ಥರನ್ನು ಕರೆದುಕೊಂಡು ಯಾವುದೋ ಊರಿಗೆ ತೆರಳುವ ಸೂಚನೆ ಅರಿತ ಬೆಕ್ಕು ಅಂದು ಸಾಯಂಕಾಲ ಕೊಕ್ಕರೆಯನ್ನು ತನ್ನ ಮನೆಗೆ ಉಪಾಹಾರಕ್ಕೆ ಬರಲು ಕೇಳಿಕೊಂಡಿತು. ಬೆಕ್ಕಿನ ಮನವಿಯಿಂದ ಸಂತಸಗೊಂಡ ಕೊಕ್ಕರೆ ತನ್ನ ಕುಟುಂಬ ಸಮೇತ ಬೆಕ್ಕಿನ ಮನೆಗೆ ಆಗಮಿಸಿತು.
ಕೊಕ್ಕರೆಯ ಕುಟುಂಬದೊಡನೆ ಸ್ವಲ್ಪ ಹೊತ್ತು ಮಾತನಾಡಿದಂತೆ ನಾಟಕವಾಡಿದ ಬೆಕ್ಕು ನಂತರ ಎಲ್ಲರಿಗೂ ಒಂದೊಂದು ತಟ್ಟೆಯಲ್ಲಿ ಮೀನಿನ ಸೂಪ್ ಹಾಕಿ ತಿನ್ನಲು ಕೊಟ್ಟಿತು. ತಮ್ಮ ಉದ್ದನೆಯ ಕೊಕ್ಕಿನಲ್ಲಿ ತಟ್ಟೆಯಲ್ಲಿದ್ದ ಸೂಪನ್ನು ಸೇವಿಸಲು ಕೊಕ್ಕರೆಗಳು ಹರಸಾಹಸ ಪಡುತ್ತಿದ್ದರೆ ಬೆಕ್ಕು ಮಾತ್ರ ಅದನ್ನೆಲ್ಲಾ ನೋಡಿ ಖುಷಿಪಡುತ್ತ ತಾನು ಮಾತ್ರ ಹೊಟ್ಟೆ ತುಂಬಾ ಸೂಪ್ ನೆಕ್ಕಿತು.
ಅಪಮಾನ ತಾಳಲಾರದೆ ಕೊಕ್ಕರೆಯು ಬೆಕ್ಕಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಮರುದಿನವೇ ಬೆಕ್ಕನ್ನು ತನ್ನ ಮನೆಗೆ ಔತಣಕ್ಕೆ ಆಹ್ವಾನಿಸಿತು. ಬೆಕ್ಕು ಸಹ ಒಪ್ಪಿ ಮರುದಿನವೇ ಕೊಕ್ಕರೆಯ ಮನೆಗೆ ಆಗಮಿಸಿ ಕುಟುಂಬದವರೊಡನೆ ಉಭಯಕುಶಲೋಪರಿ ವಿಚಾರಿಸುತ್ತಿದ್ದಾಗಲೇ ಕೊಕ್ಕರೆಯು ದೊಡ್ಡ ಹೂಜಿಯಲ್ಲಿ ರಕ್ತಾರಸವನ್ನು ಹಾಕಿ ತಂದು ಬೆಕ್ಕಿನ ಮುಂದಿರಿಸಿ ತಿನ್ನಲು ಹೇಳಿತು.
ಕೊಕ್ಕರೆಗಳೆಲ್ಲವೂ ತಮ್ಮ ಉದ್ದನೆಯ ಕೊಕ್ಕಿನಿಂದ ಹೂಜಿಯಲ್ಲಿದ್ದ ರಕ್ತವನ್ನು ಹೀರಿ ಸಂತಸಪಡುತ್ತಿದ್ದರೆ ಬೆಕ್ಕು ಮಾತ್ರ ತನ್ನ ಹೂಜಿಯಲ್ಲಿದ್ದ ರಕ್ತ ಸೇವಿಸಲಾರದೆ ಹಸಿವಿನಿಂದಲೇ ಅಲ್ಲಿಂದ ಕಾಲ್ಕಿತ್ತಿತು.
ನೀತಿ: ನಾವು ಮತ್ತೊಬ್ಬರಿಗೆ ಅಪಮಾನ ಮಾಡಲು ಹೋದರೆ ಅದೇ ನಮಗೆ ತಿರುಗುಬಾಣವಾಗುತ್ತದೆ.
ಕೃಪೆ: Kishor M N