ಪ್ರೀತಿ ಕುರುಡು ಅಂತಾರೆ (Love is Blind). ಹೌದು, ನಿಜ ಪ್ರೀತಿ ಎಂಬುವುದು ಕುರುಡು. ಏಕೆಂದರೆ ನನ್ನ ಪ್ರಕಾರ ಪ್ರೀತಿ ಎಂದರೆ ನಾವು ಹುಟ್ಟುವುದಕ್ಕಿಂತ ಮೊದಲೇ ನಮ್ಮ ಮೇಲೆ ಹುಟ್ಟಿರುವಂತಹ ಒಂದು ಮಧುರ ಬಾಂಧವ್ಯ. ಹಾಗೆಯೇ ನಾವು ಹುಟ್ಟಿದ ನಂತರ ಹುಟ್ಟುವಂತಹ ಹಲವಾರು ಪ್ರೀತಿಗಳಿವೆ, ಅವುಗಳನೆಲ್ಲಾ ‘ಕುರುಡು ಪ್ರೀತಿ’ ಎನ್ನಲಸಾಧ್ಯ. ಕುರುಡು ಪ್ರೀತಿಗೆ ಒಂದೆರಡು ಉದಾಹರಣೆ ಕೊಡುತ್ತೇನೆ. ಓದುವಾಗ ನಿಮಗೂ ಹೌದು ಅನಿಸಿದರೆ ನೀವು ‘ಪ್ರೀತಿ ಎನ್ನುವುದು ಕುರುಡು’ ಎಂದು ಒಪ್ಪಿಕೊಂಡ ಹಾಗೆ.
ಮೊದಲಿಗೆ ತಾಯಿ ಪ್ರೀತಿ: ಒಬ್ಬ ತಾಯಿ ತನ್ನ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎಂದು ಗೊತ್ತಾದ ಆ ಕ್ಷಣದಿಂದಲೆ ತನ್ನ ಮಗುವನ್ನು ಪ್ರೀತಿಸೋಕೆ ಶುರುಮಾಡುತ್ತಾಳೆ. ಯಾವತ್ತೂ ತನ್ನ ಬಗ್ಗೆ ಹೆಚ್ಚೇನೂ ಕಾಳಜಿವಹಿಸದ ಅವಳು, ಆ ಕ್ಷಣದಿಂದ ಒಂದೊಂದು ಹೆಜ್ಜೆನೂ ಯೋಚನೆ ಮಾಡಿ ಇಡುತ್ತಾಳೆ.
ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಅದೇನೂ ಅವಳಿಗೋಸ್ಕರ ಅಂದುಕೊಡ್ರ, ಖಂಡಿತ ಇಲ್ಲ. ಯಾರು ಏನು ಎತ್ತ ಹೇಗೆ ಒಂದು ಕಲ್ಪನೆಗು ಸಿಗದ, ಕಂಡೆ ಇರದ ಆ ಮಗುವಿಗೋಸ್ಕರ. ಆ ಸಮಯದಲ್ಲಿ ಅವಳಿಗೇನೆ ನೋವುಗಳಿದ್ರು ತನ್ನ ಕಾಣದ ಮಗುವಿನ ಯೋಚನೆಯಲ್ಲಿ ಎಲ್ಲಾ ನೋವುಗಳನ್ನು ಮರೆಯುತ್ತಾಳೆ. ತನ್ನ ಇಡೀ ಜೀವನವನ್ನು ಆ ಮಗುವಿಗೆ ಮುಡುಪಾಗಿಡಲು ಸಿದ್ಧಲಾಗುತ್ತಿರುತ್ತಾಳೆ. ಇದೇ ಅಲ್ವಾ ಕುರುಡು ಪ್ರೀತಿ ಅಂದ್ರೆ..?
ಎರಡನೆಯದಾಗಿ ತಂದೆ ಪ್ರೀತಿ: ಅಮ್ಮ ಜೀವ ಕೊಟ್ಟರೆ ಅಪ್ಪ ಜೀವನ ಕಟ್ಟಿಕೊಡುತ್ತಾರೆ ಅಂತಾರೆ. ಹೌದು ಒಬ್ಬ ತಂದೆ ತನ್ನವರಿಗೋಸ್ಕರ, ತನ್ನ ಮಕ್ಕಳ ಭವಿಷ್ಯಗೋಸ್ಕರ ಇಡೀ ಜೀವನವನ್ನು ಸವೆದು ಬಿಡುತ್ತಾರೆ. ಆದರೂ ಈ ಜಗತ್ತಿನಲ್ಲಿ ತಾಯಿ ಪ್ರೀತಿ ಮುಂದೆ ತಂದೆ ಪ್ರೀತಿ ಬಹಳ ಹಿಂದೆ ಉಳಿದು ಬಿಡುತ್ತದೆ.
ಒಬ್ಬ ತಂದೆ ತಾನು ಅಪ್ಪ ಆಗುತ್ತಿದ್ದೇನೆ ಎಂದು ತಿಳಿದ ಆ ಕ್ಷಣ ತಾಯಿಗಿಂತ ಒಂದುಪಟ್ಟು ಜಾಸ್ತಿಯೆ ಖುಷಿ ಪಡುತ್ತಾರೆ. ಆ ಕ್ಷಣದಿಂದ ಸಂಪೂರ್ಣವಾಗಿ ಒಬ್ಬ ಜವಾಬ್ದಾರಿಯುತ ಮನುಷ್ಯನಾಗುತ್ತಾನೆ. ತನ್ನ ಮಗುವನ್ನು ಕಾಣುವ ಮೊದಲೇ ಆರೋಗ್ಯ, ಶಿಕ್ಷಣ, ಒಂದಿಷ್ಟು ಸಂಪಾದನೆಯಲ್ಲಿ ಉಳಿತಾಯ ಇಂತಿಷ್ಟು ಯೋಜನೆಗಳನ್ನು ಹಾಕಲು ಶುರುಮಾಡುತ್ತಾರೆ. ಇದೇ ಅಲ್ವಾ ಕುರುಡು ಪ್ರೀತಿ ಅಂದ್ರೆ..?
ಮೂರನೆಯದಾಗಿ ಅಣ್ಣ-ಅಕ್ಕಂದಿರ ಪ್ರೀತಿ: ಒಂದು ವೇಳೆ ನಾವು ಹುಟ್ಟುವುದಕ್ಕಿಂತ ಮೊದಲು ಅಂದ್ರೆ ನಮಗೆ ಅಣ್ಣ-ಅಕ್ಕ ಇದ್ದರೆ, ಅವರಲ್ಲಿಯು ಈ ಪ್ರೀತಿನ ಕಾಣಬಹುದು. ನನಗೊಬ್ಬ ತಮ್ಮ ಬರುತ್ತಾನೆ ತಂಗಿ ಬರುತ್ತಾಳೆ ಎಂದು ಮನೆ ಇಡೀ ಓಡಾಡುತ್ತೆ. ಜಾಸ್ತಿ ಅಂದರೆ ಆ ಮಗುವಿಗೂ 3-4 ವರುಷವಾಗಿರುತ್ತದೆ ಅಷ್ಟೇ. ಆ ಮಗುವೇನು ನೋಡಿರುತ್ತದ ತನ್ನ ತಾಯಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು. ಇಲ್ಲ.. ಆದರೂ ತನ್ನೆಲ್ಲಾ ಆಟಿಕೆಗಳನ್ನು ತನ್ನ ತಮ್ಮನಿಗೋಸ್ಕರ ತಂಗಿಗೋಸ್ಕರ ಎಂದು ಎತ್ತಿ ಇಡಲು ಶುರು ಮಾಡುತ್ತದೆ. ಇದೇ ಅಲ್ವಾ ಕುರುಡು ಪ್ರೀತಿ ಅಂದರೆ..?
ಅಜ್ಜ- ಅಜ್ಜಿ ಪ್ರೀತಿ: ತಮಗೊಬ್ಬ ಮೊಮ್ಮಗ/ಳು ಬರುತ್ತಾನೆ ಎಂದು ತಿಳಿದ ಆ ಕ್ಷಣದಿಂದ ಸೊಸೆಯ ಮೇಲೆ ಒಂದಿಷ್ಟು ಪ್ರೀತಿ – ಕಾಳಜಿ ಜಾಸ್ತಿನೆ ಹುಟ್ಟಿಕೊಳ್ಳುತ್ತದೆ. ಅದೇನು ಸೊಸೆಗೋಸ್ಕರ ಅಂದುಕೊಡ್ರ. ಇಲ್ಲ ಅಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ತಮ್ಮ ಮೊಮ್ಮಗುವಿಗೋಸ್ಕರ. ಈ ವಿಚಾರದಲ್ಲಿ ಸಾವಿರಾರು ಆಸೆ- ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾರೆ ಅಜ್ಜ ಅಜ್ಜಿ. ಇದೇ ಅಲ್ವಾ ಕುರುಡು ಪ್ರೀತಿ ಅಂದರೆ..?
ಕೃಪೆ; ಶ್ರುತಿ ಕೆ.ಜಿ