Site icon ಹರಿತಲೇಖನಿ

ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲರು

ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ 57ನೇ ಸಿಸಿ ಹೆಚ್ ನ್ಯಾಯಾಲಯ ನಿರಾಕರಿಸಿದ ಹಿನ್ನಲೆಯಲ್ಲಿ ನಟ ದರ್ಶನ್ ಪರವಾಗಿ ವಕೀಲರಾದ ಸುನಿಲ್ ಕುಮಾರ್. ಎಸ್ ಅವರು ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ವೇಳೆ ಸೆಷನ್ಸ್ ಕೋರ್ಟ್ ನ ಆದೇಶದ ಪ್ರತಿ ಸಮೇತ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಅರ್ಜಿಯಲ್ಲಿ ದರ್ಶನ್ ಗೆ ಜಾಮೀನು ಪಡೆಯಲು ವಕೀಲರು ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಮುಖವಾಗಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ದರ್ಶನ್ ಗೆ ತೀವ್ರ ಬೆನ್ನು ನೋವು ಕಾಡುತ್ತಿದೆ. L1, L5 ನಲ್ಲಿ ನೋವು ತೀವ್ರ ವಾಗಿ ಕಾಣಿಸಿಕೊಂಡಿದೆ. ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ದರ್ಶನ್ ತೀವ್ರವಾಗಿ ಬಳಲುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯ ಇದೆ. ಈ ಬಗ್ಗೆ ವಿಮ್ಸ್ ಆಸ್ಪತ್ರೆ ವೈದ್ಯರ ಸಲಹೆ ದಾಖಲೆ ಸಮೇತ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಈ ಆರೋಗ್ಯ ಸಮಸ್ಯೆಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಈ ಪ್ರಕರಣದ ತನಿಖೆಯಲ್ಲಿ ಕೂಡ ಸಾಕಷ್ಟು ಲೋಪವಿದೆ ಎಂದು ಉಲ್ಲೇಖಿಸಿದ್ದಾರೆ.

ಇಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆ ತಡವಾಗಿ ಪಡೆದಿರುವುದು ಅನುಮಾನಸ್ಪದವಾಗಿದೆ. ಡಿಜಿಟಲ್ ಸಾಕ್ಷಿಗಳು ಸೃಷ್ಟಿಸಲಾಗಿದೆ, ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾದ ಸಾಕ್ಷ್ಯಗಳು ಸೃಷ್ಟಿಸಲಾಗಿದೆ.

ಕೃತ್ಯ ನಡೆದ ದಿನದ ಸಿಡಿಆರ್ ನಲ್ಲಿ ಯಾವುದೇ ವಿಶೇಷತೆ ಇಲ್ಲ, ಆಪ್ತರ ಜೊತೆಗಿನ ಕಾಲ್ ನಲ್ಲಿ ಯಾವುದೇ ಸಂಚು ಇಲ್ಲ ಎಂಬೆಲ್ಲಾ ತಾಂತ್ರಿಕ ಅಂಶಗಳನ್ನೂ ಸೇರಿಸಿ ದರ್ಶನ್‌ಗೆ ಜಾಮೀನು ನೀಡಬೇಕೆಂದು ಮನವಿ
ಮೂಲಕ ಅರ್ಜಿ ಸಲ್ಲಿಸಿದ್ದಾರೆ.

Exit mobile version