ಚಪ್ಪಾರ: ದಸರಾ ಮೆರವಣಿಗೆ ಬಂದಿದ್ದ ಆನೆಯೊಂದು ನಡು ರಸ್ತೆಯಲ್ಲಿ ಮನಬಂದಂತೆ ಓಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಬಿಹಾರದ ಸರನ್ ಜಿಲ್ಲೆಯ ಚಪ್ಪಾರದಲ್ಲಿ ನಡೆದಿದೆ.
ಮಾವುತನ ಸೂಚನೆಯ ಮೀರಿದ ಆನೆ ವಾಹನಗಳನ್ನು ಪುಡಿಗಟ್ಟುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ.
ಏಕಾಏಕಿ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಆನೆ ಹಲವರಿಗೆ ಪ್ರಾಣಭೀತಿಯನ್ನೂ ಉಂಟು ಮಾಡಿದೆ. ಅಲ್ಲದೆ ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಎರಡು ತಾಸುಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ.
ಆನೆಯನ್ನು ನಿಯಂತ್ರಿಸಲು ಜನರು ಅದನ್ನು ಬೆನ್ನೆಟ್ಟಿ ಓಡಿದ್ದು ಇನ್ನಷ್ಟು ಅನಾಹುತಕ್ಕೆ ಕಾರಣವಾಯಿತು ಎನ್ನಲಾಗಿದೆ. ಘಟನೆ ನಡೆದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿದೆವು. ಆದರೆ ಆನೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಉಂಟಾಗಿಲ್ಲ. ಆದರೆ ಆನೆ ಕೆರಳಲು ಕಾರಣವೇನೆಂದು ಇದುವರೆಗೂ ತಿಳಿದುಬಂದಿಲ್ಲವೆಂದು ವರದಿಯಾಗಿದೆ.