ದೊಡ್ಡಬಳ್ಳಾಪುರ: ಮೈಸೂರಿನ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ಕೇಳಿಬಂದಿದೆ.
ಇಂದು ಕೆಲ ನಿಮಿಷಗಳ ಮುಂಚೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲ್ಲೂಕಿನ ಐತಿಹಾಸಿಕ ಸ್ಥಳಕ್ಕೆ ಮಾತ್ರ ಮನ್ನಣೆ ನೀಡಲಾಗಿದೆ ಎಂಬುದು ಆಕ್ರೋಶಕ್ಕೆ ಕಾರಣ.
ವಿಜಯದಶಮಿ ದಿನದಂದು ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರತಿ ಜಿಲ್ಲೆಯಿಂದ ಆಯಾ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ವಿಶೇಷತೆಯನ್ನು ಸ್ತಬ್ದ ಚಿತ್ರದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇಂತಹ ಮಹತ್ವವಾದ ಹಿನ್ನೆಲೆ ಹೊಂದಿರುವ ಸ್ತಬ್ದ ಚಿತ್ರದಲ್ಲಿ ಈ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಯಾವುದೇ ವಿಶೇಷವನ್ನು ಸೇರ್ಪಡೆ ಮಾಡದಿರುವುದು ತಾಲೂಕಿನ ಜನರಲ್ಲಿ ಬೇಸರ ತಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದೆ ಎನ್ನಲಾಗುತ್ತಿರುವ ಸ್ತಬ್ಧ ಚಿತ್ರದಲ್ಲಿ ದೇವನಹಳ್ಳಿ ನಗರದ ಐತಿಹಾಸಿಕ ಕೋಟೆ, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ, ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಬೆಟ್ಟ, ಮಣ್ಣೆಯ ಕಪಿಲೇಶ್ವರ ದೇವಾಲಯ ಮತ್ತು ಹೊಸಕೋಟೆ ತಾಲ್ಲೂಕಿನ ಮುಕ್ತಿನಾಥೇಶ್ವರ ದೇವಾಲಯ ಸೇರಿವೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಐತಿಹಾಸಿಕ, ಪ್ರಾಕೃತಿಕ, ಧಾರ್ಮಿಕ ಸ್ಥಳಗಳಿವೆ. ವಿಶ್ವಮಟ್ಟದಲ್ಲಿ ಗುರುತಿಸುವ ಆಕಾಶವಾಣಿ ಮರುಪ್ರಸಾರ ಕೇಂದ್ರವಿದೆ. ಸ್ತಬ್ದ ಚಿತ್ರಕ್ಕೆ ಸೇರಿಸಬಹುದಾದ ಹಲವಾರು ವಿಶೇಷಗಳಿದ್ದರೂ ಅವುಗಳಲ್ಲಿ ಒಂದನ್ನು ಪರಿಗಣಿಸಿಲ್ಲ.
ದೇವನಹಳ್ಳಿ ಮತ್ತು ನೆಲಮಂಗಲ ತಾಲ್ಲೂಕುಗಳಿಂದ ತಲಾ ಎರಡು ಸ್ಥಳಗಳನ್ನು ಸ್ತಬ್ದಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕಡೆಗಣಿಸಲಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.