ಮೈಸೂರು: ಒಂಬತ್ತು ದಿನಗಳ ನವರಾತ್ರಿ ಸಂಪನ್ನಗೊಂಡಿದ್ದು, ಜಗತ್ ಪ್ರಸಿದ್ದ ನಾಡಹಬ್ಬ ಮೈಸೂರು ದಸರಾ 2024ರ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ವಿಜಯದಶಮಿ ಅಂಗವಾಗಿ ಮೈಸೂರಿನಲ್ಲಿ ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆಗಳು ಆರಂಭವಾಗಿದೆ.
ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದ್ದು, ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಅದ್ಧೂರಿ ಚಾಲನೆ ನೀಡಲಿದ್ದಾರೆ.
ಇಂದು ನಡೆಯುವ ಜಂಬೂಸವಾರಿಗೆ ದೇಶವಿದೇಶಗಳಿಂದ ಪ್ರವಾಸಿಗರು, ಅತಿಥಿಗಳು ಆಗಮಿಸುವ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಅಂಬಾರಿಯಲ್ಲಿ ಇರಿಸಲಾಗುವ ಚಾಮುಂಡಿ ತಾಯಿಯ ಉತ್ಸವಮೂರ್ತಿ ಚಾಮುಂಡಿ ಬೆಟ್ಟದಿಂದ ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ. ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭವಾಗಲಿದೆ.
ಇನ್ನು 10:45 ರಿಂದ 11 ಗಂಟೆ ಒಳಗೆ ಅರಮನೆಯ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ, ವಜ್ರಮುಷ್ಟಿ ಕಾಳಗ ನಡೆಯಲಿದೆ.
ಜಟ್ಟಿಕಾಳಗ ಮುಗಿದ ಬಳಿಕ, 11:20 ರಿಂದ 11:45 ರ ವರೆಗೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ವಿಜಯಯಾತ್ರೆ ಹೊರಡಲಿದ್ದು, ಬನ್ನಿಪೂಜೆ ಬಳಿಕ ಸ್ವಸ್ಥಾನಕ್ಕೆ ವಾಪಸ್ ಆಗಲಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)