ಬೆಂಗಳೂರು: ʼರಾಜ್ಯ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿರುವ ಮಹತ್ವಾಕಾಂಕ್ಷಿ ಜ್ಞಾನ, ಆರೋಗ್ಯ ಮತ್ತು ನಾವೀನ್ಯತಾ ನಗರ (ಕ್ವಿನ್ ಸಿಟಿ) ಯೋಜನೆಯು, ಅಮೆರಿಕದಲ್ಲಿನ ಜಾಗತಿಕ ಉದ್ಯಮ ದಿಗ್ಗಜರ ಜೊತೆಗಿನ ಸಮಾಲೋಚನೆಗಳಲ್ಲಿ ಚರ್ಚೆಯ ಕೇಂದ್ರಬಿಂದು ಆಗಿದೆʼ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಅಮೆರಿಕದ ದೈತ್ಯ ಉದ್ಯಮಗಳಿಗೆ ಆಹ್ವಾನ ನೀಡಲು ಅಮೆರಿಕ ಪ್ರವಾಸದಲ್ಲಿ ಇರುವ ಸಚಿವ ಪಾಟೀಲರು, ನ್ಯೂಯಾರ್ಕ್‌ನಲ್ಲಿ ಫಿಡೆಲಿಟಿ, ಕೊಲಂಬಿಯಾ ವಿಶ್ವವಿದ್ಯಾಲಯ, ಆ್ಯಕ್ಸಿಯಂ ಸ್ಪೇಸ್, ಬೇಟಾ ಟೆಕ್ನಾಲಜಿ ಕಂಪನಿಗಳ ಪ್ರಮುಖರ ಜೊತೆಗೆ ನಡೆಸಿದ ಸಭೆಗಳಲ್ಲಿ ʼಕ್ವಿನ್ ಸಿಟಿʼ ಯೋಜನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ರಾಜ್ಯದಲ್ಲಿ ಸಮತೋಲನದ ಕೈಗಾರಿಕಾ ಬೆಳವಣಿಗೆ ಸಾಧಿಸಲು ದಾಬಸ್‌ಪೇಟೆ ಬಳಿ 5,800 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ʼಕ್ವಿನ್ ಸಿಟಿʼ ಯೋಜನೆಯಲ್ಲಿ ಭಾಗಿಯಾಗುವ ಬಗ್ಗೆ ಅಮೆರಿಕದ ವಿವಿಧ ಕಂಪನಿಗಳು ತೀವ್ರ ಆಸಕ್ತಿ ತೋರಿಸಿವೆ.
ಫಿಡೆಲಿಟಿ ಸೆಂಟರ್ ಫಾರ್ ಅಪ್ಲೈಡ್ ಟೆಕ್ನಾಲಜಿಯ ಹಿರಿಯ ಉಪಾಧ್ಯಕ್ಷ ಬಿಜು ಕೆಕೆ ಅವರು, ʼಕ್ವಿನ್ ಸಿಟಿʼಯಲ್ಲಿ ವಹಿವಾಟು ವೃದ್ಧಿ ಹಾಗೂ ಬೆಳವಣಿಗೆ ಸಾಧ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ʼಕ್ವಿನ್ ಸಿಟಿ”ಯಲ್ಲಿನ ಹೊಸ ಶಿಕ್ಷಣ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಇರುವ ಅವಕಾಶಗಳ ಬಗ್ಗೆ ಕೊಲಂಬಿಯಾ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಪ್ರಮುಖವಾಗಿ ಚರ್ಚಿಸಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪಾಲ್ಗೊಳ್ಳುವಿಕೆಯು ರಾಜ್ಯದಲ್ಲಿನ ಉನ್ನತ ಶಿಕ್ಷಣದ ಭವಿಷ್ಯ ರೂಪಿಸಲು ನೆರವಾಗಲಿದೆ.
ಆ್ಯಕ್ಸಿಯಂ ಸ್ಪೇಸ್‌ನ ಮುಖ್ಯ ರೆವಿನ್ಯೂ ಅಧಿಕಾರಿ ತೇಜ್‌ಪೌಲ್ ಭಾಟಿಯಾ ಅವರ ಜೊತೆಗೆ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಬಾಹ್ಯಾಕಾಶ ಕ್ಷೇತ್ರದಲ್ಲಿ ವಹಿವಾಟು ವಿಸ್ತರಣೆಗೆ ಇರುವ ವಿಪುಲ ಅವಕಾಶಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಅವಕಾಶ ಕುರಿತು ಸಚಿವರು ಬೀಕನ್ ಇಂಡಸ್ಟ್ರೀಸ್‌ನ ಸುರೇಶ್ ಮೀರಚಂದಾನಿ ಜೊತೆಗೆ ವಿವರವಾಗಿ ಚರ್ಚಿಸಿದ್ದಾರೆ.
ಬೇಟಾ ಟೆಕ್ನಾಲಜಿಸ್‌ನ ಬ್ಲೇಕ್ ಒಪ್ಸಾಹ್ಲ್ ಮತ್ತು ಹಂಚ್ ಮೊಬಿಲಿಟಿಯ ಪವನ್ ಬಕ್ಷಿ ಅವರನ್ನು ಭೇಟಿಯಾಗಿರುವ ಸಚಿವ ಪಾಟೀಲ ಅವರು. ನಗರ ವಾಯು ಸಂಚಾರ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸಬೇಕು ಎಂದು ಸಚಿವರು ಬೇಟಾ ಟೆಕ್ನಾಲಜಿಸ್‌ಗೆ ಆಹ್ವಾನ ನೀಡಿದ್ದಾರೆ.
ದುಂಡುಮೇಜಿನ ಸಭೆ:
ನ್ಯೂಯಾರ್ಕ್‌ನಲ್ಲಿನ ಭಾರತದ ಕಾನ್ಸುಲೇಟ್ ಜನರಲ್, ಅಮೆರಿಕ – ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿ) ಸಹಯೋಗದಲ್ಲಿ ದುಂಡುಮೇಜಿನ ಸಭೆ ಆಯೋಜಿಸಿತ್ತು. ಅಂತರರಾಷ್ಟ್ರೀಯ ಸಹಯೋಗ ಮತ್ತು ಆರ್ಥಿಕ ಪಾಲುದಾರಿಕೆಗೆ ಕರ್ನಾಟಕವು ಸನ್ನದ್ಧ ಸ್ಥಿತಿಯಲ್ಲಿ ಇರುವುದನ್ನು ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಹಾಗೂ ಅಮೆರಿಕಾದ ಉದ್ಯಮಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.