ನವದೆಹಲಿ: ಶುಕ್ರವಾರ ರಾತ್ರಿ 8.30ರ ಸುಮಾರಿಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ನಡೆದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಪದೇ ಪದೇ ಸಂಭವಿಸುತ್ತಿರುವ ರೈಲುಗಳ ಅಪಘಾತ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹಲವಾರು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡರೂ, ಕೇಂದ್ರ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಘಟನೆಗೆ ಮುಂಜಾಗ್ರತೆ ವಹಿಸುತ್ತಿಲ್ಲ.. ಈ ಸರಕಾರ ಎಚ್ಚೆತ್ತುಕೊಳ್ಳುವ ಮುನ್ನ ಇನ್ನೂ ಎಷ್ಟು ಕುಟುಂಬಗಳು ಬಲಿಯಾಗಬೇಕು? ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿರುವ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಈ ರೀತಿ ಘಟನೆಗಳು ಮರುಕಳಿಸದಂತೆ ರೈಲ್ವೆ ಇಲಾಖೆ ಸಿಬ್ಬಂದಿಗಳು ಮುಂಜಾಗ್ರತೆ ವಹಿಸುವಂತೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಇನ್ನೂ ಲೋಕಾಯುಕ್ತ ಎಡಿಜಿಪಿ ಅವರ ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ನಾವು ಯಾವುದೇ ಬೆದರಿಕೆಯನ್ನು ಹಾಕಿಲ್ಲ ಇರುವ ವಾಸ್ತವವನ್ನು ಹೇಳಿದ್ದೇವೆ. ಕಾನೂನಿನ ಮೇಲೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ.
ರಾಜ್ಯ ಸರ್ಕಾರ ಅವರನ್ನು ರಕ್ಷಿಸುತ್ತಿದೆ. ಹಲವು ವರ್ಷಗಳಿಂದ ರಾಜಕೀಯ ಪ್ರೇರಿತ ದೂರು ನೀಡಲಾಗುತ್ತಿದೆ.. ನಾವೆಲ್ಕ ಓಡುಹೋಗಿಲ್ಲ ನ್ಯಾಯಾಲಯದಲ್ಲಿ ಎದುರಿಸುತ್ತೇವೆ ಎಂದಿದ್ದಾರೆ.