ನವದೆಹಲಿ: ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾಗಿದ್ದು, ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರಕ್ಕೆ ಆಗ್ರಹ ಮಾಡಿದೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಿದ ಬಳಿಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಬಗ್ಗೆ ಏಕನಾಥ್ ಶಿಂದೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವುದರ ಜತೆಗೇ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಹುದು. ಅದಕ್ಕೆ ನಿಜವಾದ ದೇಶಭಕ್ತಿ ಮತ್ತು ಸಮಾಜದ ಬಗ್ಗೆ ಪ್ರಾಮಾಣಿಕ ಕಾಳಜಿ ಅಗತ್ಯ. ರತನ್ ಟಾಟಾ ಅವರಲ್ಲಿ ಈ ಗುಣಗಳಿದ್ದವು. ಉದ್ಯಮ ಕ್ಷೇತ್ರ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿ ಕಾರ್ಯ ದಲ್ಲೂ ಅವರ ಕೊಡುಗೆ ಅಪಾರ. ಅವರು ಮಹಾರಾಷ್ಟ್ರದ ಮಗ ಮತ್ತು ಭಾರತದ ಹೆಮ್ಮೆ. ಹಾಗಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಲ್ಲಲೇಬೇಕು ಎಂದು ರಾಜ್ಯ ಸರಕಾರ ಆಗ್ರಹಿಸಿದೆ.
ರತನ್ ಟಾಟಾ ಉನ್ನತ ನೈತಿಕ ಮೌಲ್ಯಗಳನ್ನು ಅನುಸರಿಸಿದರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರ ತದ ಛಾಪು ಮೂಡಿಸಿದರು. ಅವರ ಸಾವಿನಿಂದ ದೇಶದ ಪ್ರಮುಖ ಸ್ತಂಭವೇ ಕುಸಿದಂತಾಗಿದೆ ಎಂದು ತಿಳಿಸಿದ್ದಾರೆ.
ರತನ್ ಟಾಟಾ ಅವರಿಗೆ ಭಾರತ ರತ್ನ ನೀಡದ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದ್ದು, ಮೋದಿ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.