ಬೆಂಗಳೂರು: ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಪದೇ ಪದೇ ತಾರತಮ್ಯ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರೆ ಭಾರತೀಯರು ಜನತಾ ಪಾರ್ಟಿ ಹೇಳೆಕಿಯನ್ನು ತಿರುಚುತ್ತದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದರು.
ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರದಿಂದ ಜಿಎಸ್ಟಿ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂದು ಆರೋಪಿಸಿದರು, ಕಳೆದ ಬಾರಿಯೇ ಈ ವಿಷಯ ಪ್ರಸ್ತಾಪ ಮಾಡಿದ್ದೆ. ರಾಜ್ಯ, ದಕ್ಷಿಣ ಭಾರತಕ್ಕೆ ಅನ್ಯಾಯ ಎಂದಿದ್ದೆ. ಆಗ ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ವಿವಾದ ಮಾಡಿದ್ದರು. ಇದು ಪದೇ ಪದೇ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಕೇಂದ್ರ ತೆರಿಗೆ ಹಣ ಬಿಡುಗಡೆ ಮಾಡಿದೆ. ದಕ್ಷಿಣ ಭಾರತಕ್ಕೆ 28,152 ಕೋಟಿ ರೂ. ನೀಡಿದೆ. ಉತ್ತರ ಪ್ರದೇಶ ಒಂದಕ್ಕೆ 32,000 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಪದೇ ಪದೇ ದಕ್ಷಿಣ ಭಾರತೀಯರನ್ನ, ಕನ್ನಡಿಗರನ್ನ ಕೆಣಕುವ ಪ್ರಯತ್ನ ನಡೆದಿದೆ ಎಂದು ಕಿಡಿ ಕಾರಿದರು.
ದುಃಖದಿಂದ ಈ ಮಾತು ಹೇಳಬೇಕಿದೆ. ರಾಜ್ಯದ ಅಭಿವೃದ್ಧಿಗೆ ಅನ್ಯಾಯವಾಗ್ತಿದೆ. ದಕ್ಷಿಣ ರಾಜ್ಯಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು. ಬಿಜೆಪಿಯ 19 ಸಂಸದರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇದೆ. ಆದರೆ ಸಂಸದರು ಧ್ವನಿ ಎತ್ತುತ್ತಿಲ್ಲ. ನಾನು ಒತ್ತಾಯ ಮಾಡುತ್ತೇನೆ. ನಿಮ್ಮ ನೀತಿಯನ್ನು ಬದಲಾವಣೆ ಮಾಡಿಕೊಳ್ಳಿ. ರಾಜ್ಯಕ್ಕೆ, ದಕ್ಷಿಣ ಭಾರತಕ್ಕೆ ಹೆಚ್ಚಿನ ತೆರಿಗೆ ನೀಡಿ. ಕರ್ನಾಟಕವನ್ನು ಕಡೆಗಣಿಸಬೇಡಿ ಎಂದು ಆಗ್ರಹಿಸಿದರು.
ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ. ತಮಿಳುನಾಡಿನಲ್ಲಿ ಬಹಳ ಹಿಂದೆಯೇ ಕೂಗಿತ್ತು. ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ. ನಾವೂ ಭಾರತಾಂಬೆಯ ಮಕ್ಕಳು. ನಮಗೂ ಅನ್ಯಾಯವನ್ನು ಪ್ರಶ್ನಿಸುವ ಹಕ್ಕಿದೆ.. ಪದೇ ಪದೇ ಅನ್ಯಾಯ ಮಾಡಿ ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.