Site icon ಹರಿತಲೇಖನಿ

ಹರಿತಲೇಖನಿ ದಿನಕ್ಕೊಂದು ಕಥೆ: ಹಾವು – ಮುಂಗುಸಿಯ ದ್ವೇಷದ ಮೂಲ

Channel Gowda
Hukukudi trust

ಬಹಳ ಹಿಂದಿನ ಕಾಲದಲ್ಲಿ ಒಬ್ಬ ರೈತ ಕಾಡಿನ ಪಕ್ಕದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಮನೆಯಲ್ಲಿ ಹಲವಾರು ಹಸುಗಳ ಜೊತೆಗೆ ಒಂದು ಮುಂಗುಸಿಯನ್ನೂ ಸಾಕಿದ್ದ. ಪ್ರತಿ ದಿನವೂ ಹಸುಗಳನ್ನು ಪಕ್ಕದ ಕಾಡಿನಲ್ಲಿ ಮೇಯಿಸಿಕೊಂಡು ಬರಲು ಹೋದಾಗ ಮುಂಗುಸಿಯು ಅವನ ಜೊತೆ ಇದ್ದು, ಹಸುಗಳು ಆಚೀಚೆ ಹೋಗದಂತೆ ಸಹಾಯ ಮಾಡುತ್ತಿತ್ತು. ಅದಕ್ಕಾಗಿ ರೈತ, ಮುಂಗುಸಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.

Aravind, BLN Swamy, Lingapura

ರೈತನ ಮನೆಯ ಹಿಂಭಾಗದ ಹುತ್ತದಲ್ಲಿ ಹಾವೊಂದು ವಾಸ ಮಾಡುತ್ತಿತ್ತು. ಇದು ನಿತ್ಯವೂ ರೈತ ಮತ್ತು ಮುಂಗುಸಿಯ ಪ್ರೀತಿಯ ನಡವಳಿಕೆ ಗಮನಿಸುತ್ತ ಹೊಟ್ಟೆಕಿಚ್ಚು ಪಡುತ್ತಾ, ತಾನಿರುವಲ್ಲಿಯೇ ತನ್ನ ದೇಹವನ್ನು ನೆಲಕ್ಕೆ ಉಜ್ಜಿಕೊಂಡು ಹೊರಳಾಡುತ್ತ ಸಂಕಟಪಡುತ್ತಿತ್ತು. ‘ಮುಂಗುಸಿಯಂತೆಯೇ ನಾನೂ ಒಂದು ಜೀವಿ. ಆದರೂ ರೈತನಿಗೆ ನನ್ನ ಮೇಲೆ ಇಲ್ಲದ ಅಕ್ಕರೆ ಮುಂಗುಸಿಯ ಮೇಲೇಕೆ’ ಎಂಬ ಮತ್ಸರ ಭಾವನೆ ಆ ಹಾವಿನಲ್ಲಿ ಇತ್ತು. ಹೇಗಾದರೂ ಮಾಡಿ ತಾನೂ ರೈತನಿಗೆ ಹತ್ತಿರವಾಗಿ ಅವನ ಪ್ರೀತಿ ಗಳಿಸಿಕೊಳ್ಳಬೇಕು, ಮುಂಗುಸಿಯ ಮೇಲೆ ರೈತನಿಗೆ ದ್ವೇಷ ಭಾವನೆ ಬರುವಂತೆ ಮಾಡಬೇಕೆಂದು ಹಾವು ನಿರ್ಧಾರ ಮಾಡಿತು.

ಒಂದು ದಿನ ರೈತನು ಮುಂಗುಸಿಯ ಜೊತೆ ದನಗಳನ್ನು ಪಕ್ಕದ ಕಾಡಿಗೆ ಮೇಯಿಸಲು ಕಳಿಸಿ, ತಾನು ಹೊಲದಲ್ಲಿ ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದನು. ಆಗ ನೇಗಿಲು ಮಗುಚಿದ್ದ ಮಣ್ಣಿನ ಅಡಿಯಿಂದ ಹೊರಬರುತ್ತಿದ್ದ ಇಲಿಗಳನ್ನು ಹಾವು ಹೆಕ್ಕಿ ಕೊಲ್ಲತೊಡಗಿತು. ಇದನ್ನು ಗಮನಿಸಿದ ರೈತ, ಬಿತ್ತಿದ ಕಾಳುಗಳನ್ನು ತಿಂದು ಹಾಳು ಮಾಡುತ್ತಿದ್ದ ಇಲಿಗಳನ್ನು ಹಾವು ನಾಶಪಡಿಸುತ್ತಿರುವುದಕ್ಕೆ ಸಂತಸಪಟ್ಟನು. ಹಾಗೆಯೇ ಹಾವಿನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ, ನಿತ್ಯವೂ ತನ್ನ ಜೊತೆಗೆ ಇರು ಎಂದು ಹಾವನ್ನು ಕೇಳಿಕೊಂಡನು. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಹಾವಿಗೆ ಪರಮಾನಂದವಾಯಿತು.

Aravind, BLN Swamy, Lingapura

ಅಂದಿನಿಂದ ರೈತನ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಅದು ವಾಸಿಸತೊಡಗಿತು. ದಿನಗಳು ಕಳೆದಂತೆಲ್ಲ ಹಾವು ಮತ್ತು ರೈತನ ಸ್ನೇಹ ಗಾಢವಾದುದನ್ನು ಗಮನಿಸಿದ ಮುಂಗುಸಿ ತಾನೇನೂ ಬೇಸರ ಮಾಡಿಕೊಳ್ಳದೆ ದನ ಮೇಯಿಸುವ ಕಾಯಕದಲ್ಲಿ ತನ್ನ ಪಾಡಿಗೆ ತಾನು ಇತ್ತು. ಹಾವು ಕೂಡ ರೈತನೊಟ್ಟಿಗೆ ಇದ್ದುಕೊಂಡೇ ಮುಂಗುಸಿಯನ್ನು ಓಡಿಸಲು ಹೊಂಚು ಹಾಕುತ್ತಿತ್ತು.

ಒಂದು ದಿನ ದನಗಳನ್ನು ಮೇಯಿಸಲು ಹೋದಾಗ ಚಿರತೆಯೊಂದು ಎರಡು ಹಸುಗಳನ್ನು ಕೊಂದು ತಿಂದುಬಿಟ್ಟಿತು. ಈ ವಿಷಯವನ್ನು ಮುಂಗುಸಿಯು ರೈತನಿಗೆ ಹೇಳಿದಾಗ ಆತ ಬೇಸರಪಡದೆ ‘ಹೋಗಲಿ ಬಿಡು, ಪಾಪ! ನೀನೇನು ಮಾಡೋಕಾಗುತ್ತೆ’ ಎಂದು ಸಮಾಧಾನ ಹೇಳಿದನು. ಮುಂಗುಸಿಗೆ ಶಿಕ್ಷೆ ಆಗುತ್ತದೆ ಎಂದು ಕಾದಿದ್ದ ಹಾವಿಗೆ ನಿರಾಸೆಯಾಯಿತು.

ಹಸು ಸಾವು

ಇನ್ನೊಂದು ದಿನ ಒಂದು ಹಸು ಕಾಡಿನಲ್ಲಿ ಪ್ರಾಣಬಿಟ್ಟಿತು. ಆಗಲೂ ರೈತ, ಆ ಹಸುವಿಗೆ ಏನೋ ಅನಾರೋಗ್ಯ ಆಗಿದ್ದಿರಬಹುದೆಂದು ಸುಮ್ಮನಾದನು. ಆದರೆ, ನಂತರ ಹಲವು ದಿನಗಳವರೆಗೆ ಒಂದೊಂದು ಹಸು ಕಾಡಿನಲ್ಲಿ ಸಾಯುತ್ತಿದ್ದುದನ್ನು ಕಂಡು ರೈತ ಅನುಮಾನಗೊಂಡು ಮುಂಗುಸಿಗೆ ಎಚ್ಚರಿಕೆ ನೀಡಿದ. ಚಿರತೆಗಳು ಕೊಂದಿದ್ದರೆ, ಮೂಳೆ ಮಾಂಸಗಳಾದರೂ ಉಳಿಯಬೇಕಿತ್ತು. ಆದರೆ ಹಸುಗಳು ಸುಮ್ಮನೆ ಸಾಯುತ್ತಿರುವುದೇಕೆ ಎಂಬುದನ್ನು ಕಂಡು ಹಿಡಿಯಬೇಕೆಂದು ಗುಟ್ಟಾಗಿ ಮುಂಗುಸಿಗೆ ತಿಳಿಸಿದ.

ಒಮ್ಮೆ ಮುಂಗುಸಿಯು ಎಲ್ಲಾ ಹಸುಗಳ ಮೇಲೆ ಕಣ್ಣಿಟ್ಟು ಕಾಯುತ್ತಿರುವಾಗ, ರೈತ ಸಾಕಿದ ಹಾವೇ ದೊಡ್ಡ ಪೊದೆಯ ಹಿಂದೆ ಹಸುವನ್ನು ಕಚ್ಚುವುದನ್ನು ನೋಡಿತು. ಮುಂಗುಸಿಯು ಓಡೋಡಿ ಬಂದು ರೈತನಿಗೆ ಈ ವಿಷಯ ಹೇಳಿತು.

ತಾನು ಸಾಕಿದ ಹಾವೇ ತನಗೆ ಮೋಸ ಮಾಡುತ್ತಿದೆಯಲ್ಲ ಎಂಬ ಕೋಪದಿಂದ ಸಂಜೆ ಹೊತ್ತಿಗೆ ಮನೆಯ ಕಡೆ ಮರಳಿ ಬಂದ ಹಾವನ್ನು ಕಲ್ಲಿನಿಂದ ಚಚ್ಚಿ ರೈತನು ಕೊಂದು ಹಾಕಿದನು. ಇದನ್ನು ಗಮನಿಸಿದ ಹಾವಿನ ಮರಿಗಳು ಪ್ರತೀಕಾರವಾಗಿ ರೈತನನ್ನು, ಮುಂಗುಸಿಯನ್ನು ಮತ್ತು ಉಳಿದ ಎಲ್ಲಾ ಹಸುಗಳನ್ನು ತಮ್ಮ ವಿಷದ ಹಲ್ಲುಗಳಿಂದ ಕಚ್ಚಿ ಸಾಯಿಸುವುದಾಗಿ ಪ್ರತಿಜ್ಞೆ ಮಾಡಿದವು.

ಮುಂಗುಸಿ ವಿಷ ನಿರೋಧಕ ಗಿಡ–ಮೂಲಿಕೆ ಬಳಸಿ, ಮಾಲೀಕನನ್ನು ಹಾಗೂ ಆತನ ಹಸುಗಳನ್ನು ಕಾಪಾಡುವುದಾಗಿ ಪ್ರಮಾಣ ಮಾಡಿತು. ಇದನ್ನು ಕೇಳಿ ರೈತ ಸಂತೋಷಪಟ್ಟ. ಇದೇ ಕಾರಣದಿಂದಾಗಿ ಹಾವು– ಮುಂಗುಸಿ ದ್ವೇಷ ಬೆಳೆಸಿಕೊಂಡಿವೆ. ಇಂದಿಗೂ ಅವುಗಳ ಹಗೆತನ ಹಾಗೇ ಮುಂದುವರೆದಿದೆ.

ಕೃಪೆ: ಹೊ.ರಾ.ಪರಮೇಶ್, ಹೊಡೇನೂರು (ಸಾಮಾಜಿಕ ಜಾಲತಾಣ)

Exit mobile version