ಬೆಂಗಳೂರು: ʼಕರ್ನಾಟಕ ಸರ್ಕಾರವು ಇತ್ತೀಚೆಗೆ ಆರಂಭಿಸಿರುವ ಮಹತ್ವಾಕಾಂಕ್ಷಿ ಮತ್ತು ದೂರದೃಷ್ಟಿಯ ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ಅತ್ಯಾಧುನಿಕ ನಗರ ದೊಡ್ಡಬಳ್ಳಾಪುರ ಸಮೀಪದ (ಕ್ವಿನ್ ಸಿಟಿ) ಯೋಜನೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅಮೆರಿಕದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ತೀವ್ರ ಆಸಕ್ತಿ ತೋರಿಸಿವೆʼ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.
ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಅಮೆರಿಕದ ಅಧಿಕೃತ ಪ್ರವಾಸದಲ್ಲಿ ಇರುವ ಸಚಿವರು, ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ, ಕೇರ್ ಬಿಸಿನೆಸ್ ಸ್ಕೂಲ್ ಮತ್ತು ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಆ್ಯಂಡ್ ಸ್ಕೂಲ್ ಆಫ್ ಮೆಡಿಸಿನ್-ನ ಉನ್ನತ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ʼಕರ್ನಾಟಕ ಸರ್ಕಾರ ಮತ್ತು ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆ ಸಾಧ್ಯತೆಗಳನ್ನು ಈ ಸಭೆಗಳಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಜಿಇ ಹೆಲ್ತ್‌ಕೇರ್, ಎಲ್3 ಹ್ಯಾರಿಸ್ ಟೆಕ್ನಾಲಜೀಸ್‌ನ ಉನ್ನತ ಪ್ರತಿನಿಧಿಗಳ ಜೊತೆಗೆ ನಡೆದ ಮಾತುಕತೆಗಳೂ ಆಶಾದಾಯಕವಾಗಿವೆʼ ಎಂದು ಸಚಿವರು ಹೇಳಿದ್ದಾರೆ.
ʼಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯವು ಕ್ವಿನ್ ಸಿಟಿ ಯೋಜನೆಯಲ್ಲಿ ಹೊಸ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ರಾಜ್ಯದಲ್ಲಿ ಜಿಇ ಹೆಲ್ತ್‌ಕೇರ್‌ನ ವೈದ್ಯಕೀಯ ಉಪಕರಣಗಳ ತಯಾರಿಕಾ ಸಾಮರ್ಥ್ಯವನ್ನು ಸಹಯೋಗದ ಮೂಲಕ ಹೆಚ್ಚಿಸುವ ಸಾಧ್ಯತೆಗಳನ್ನೂ ಚರ್ಚಿಸಲಾಗಿದೆ.
ʼವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ದೈತ್ಯ ಕಂಪನಿ ಎಲ್3 ಹ್ಯಾರಿಸ್ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ಡೇವ್ ಜಾನ್ಸನ್ ಅವರ ಜೊತೆಗಿನ ಭೇಟಿಯಲ್ಲಿ ಕಂಪನಿಯು ಕರ್ನಾಟಕದಲ್ಲಿನ ತನ್ನ ವಿಸ್ತರಣಾ ಯೋಜನೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆʼ ಎಂದು ಸಚಿವರು ತಿಳಿಸಿದ್ದಾರೆ.
ಆರೋಗ್ಯ, ವೈಮಾಂತರಿಕ್ಷ, ರಕ್ಷಣೆ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆ ಮತ್ತು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸಲು ಸಚಿವರು ಅಮೆರಿಕದ ಪ್ರಮುಖ ಉದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಫಲಪ್ರದ ಚರ್ಚೆ ನಡೆಸಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಔಪಚಾರಿಕ ಆಹ್ವಾನವನ್ನೂ ನೀಡಿದ್ದಾರೆ.
ವೈದ್ಯಕೀಯ ಸಲಕರಣೆಗಳ ತಯಾರಿಕಾ ವಲಯದಲ್ಲಿ ಪಾಲುದಾರಿಕೆ ಕುರಿತು ಚರ್ಚಿಸಲು ಜಿಇ ಹೆಲ್ತ್‌ಕೇರ್‌ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ನೀತಿಯ ಕಾರ್ಯನಿರ್ವಾಹಕ ನಿರ್ದೇಶಕ ಆಂಡ್ರ್ಯೂ ಕ್ವಿನ್ ಅವರನ್ನು ಸಚಿವರು ಭೇಟಿಯಾಗಿದ್ದರು.
ಸಚಿವರ ನೇತೃತ್ವದಲ್ಲಿನ ರಾಜ್ಯದ ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್ ಅವರು ಇದ್ದಾರೆ.