ದೊಡ್ಡಬಳ್ಳಾಪುರ: ನಗರದ ನಾಗರಕೆರೆ ಏರಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಹಾಗೂ ಪೂಜಾ ಸಾಮಗ್ರಿಗಳು ಕಳ್ಳತನವಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದೇವಾಲಯದ ಮುಂಭಾಗದ ಚಿಲಕವನ್ನು ಕೊಯ್ದು, ಒಳ ನುಗ್ಗಿರುವ ಕಳ್ಳರು ದೇವಾಲಯದಲ್ಲಿನ ಎರಡು ಸಣ್ಣ ಹುಂಡಿಗಳನ್ನು ಹೊಡೆದು ಹುಂಡಿಯಲ್ಲಿದ ಹಣ ದೋಚಿದ್ದಾರೆ.
ಇದರೊಂದಿಗೆ ದೇವಾಲಯದ ಗರ್ಭಗುಡಿಯಲ್ಲಿದ್ದ ಸಾವಿರಾರು ರೂ ಮೌಲ್ಯದ ತೂಗುದೀಪ, ಮಂಗಳಾರತಿ ತಟ್ಟೆ, ಸಣ್ಣ ಕಿರೀಟವನ್ನು ಕಳ್ಳತನ ಮಾಡಿದ್ದಾರೆ.
ಹುಂಡಿಯಲ್ಲಿ ಅಷ್ಟೇನೂ ಹಣ ಇರಲಿಲ್ಲ ಎಂದು ತಿಳಿದು ಬಂದಿದೆ. ಆದರೆ ಹಿತ್ತಾಳಿಯ ಪೂಜಾ ಸಾಮಗ್ರಿಗಳು ಸುಮಾರು 10 ಸಾವಿರ ರೂ ಬೆಲೆ ಬಾಳಲಿವೆ ಎಂದು ದೇವಾಲಯದ ಸಮಿತಿಯವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಾಲಯದ ಬಳಿ ರಾತ್ರಿ ಸಂಚಾರ ಇರುವುದಿಲ್ಲ. ನಾಗರಕೆರೆ ಏರಿ ಮೇಲೆ ಬೆಳಿಗ್ಗೆ ಮತ್ತು ಸಂಜೆ ವಾಯು ಸಂಚಾರ ಮಾಡುವವರಿಗೆ ರಕ್ಷಣೆ ಒದಗಿಸಲು ಪೊಲೀಸ್ ಬೀಟ್ ಹಾಕಲಾಗಿದೆ. ಆದರೂ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ ವೇಳೆಯೂ ಪೊಲೀಸ್ ಬೀಟ್ ಹಾಕಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.