Site icon ಹರಿತಲೇಖನಿ

ಬಸ್‌ ಡಿಕ್ಕಿ: ಬಿದ್ದ ಮಹಿಳೆ ಕಾರಿಗೆ ಸಿಲುಕಿ ಸಾವು..!

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್‌ ತಗುಲಿ (accident) ರಸ್ತೆಗೆ ಬಿದ್ದ ಮಹಿಳೆಗೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ ಕೊಂಚ ದೂರ ಎಳೆದೊಯ್ದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉಲ್ಲಾಳ ಉಪನಗರ ನಿವಾಸಿ ಮೋನಿಕಾ (28) ಮೃತ ದುರ್ದೈವಿ. ಮಂಗಳವಾರ ಉಲ್ಲಾಳ ಉಪನಗರದ ಕೆರೆ ಸಮೀಪದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಬೈಕ್ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.

ಉಲ್ಲಾಳ ಉಪನಗರದ ಕೆರೆ ಬಳಿಯ 80 ಅಡಿ ರಸ್ತೆಯಲ್ಲಿ ತೆರಳುವಾಗ ಅತಿವೇಗದಿಂದ ಬಂದ ಬಿಎಂಟಿಸಿ ಬಸ್, ದ್ವಿಚಕ್ರ ವಾಹನಕ್ಕೆ ತಾಕಿದೆ (accident). ಇದರಿಂದ ನಿಯಂತ್ರಣ ತಪ್ಪಿ ಮೋನಿಕಾ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಕಾರೊಂದು ಮೋನಿಕಾಗೆ ಡಿಕ್ಕಿಯಾಗಿ ಕೊಂಚ ದೂರ ಎಳೆದೊಯ್ದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಬಿಎಂಟಿಸಿ ಬಸ್, ಕಾರು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version