ಚಂಡೀಗಢ: ಹರಿಯಾಣ (haryana) ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮಹತ್ವದ ಘಟಕ್ಕೆ ಬಂದಿದ್ದು, ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಇದೀಗ ಬಂದ ಚುನಾವಣೆ ಆಯೋಗದ ವರದಿ ಅನ್ವಯ ಹರಿಯಾಣದಲ್ಲಿ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, 3ನೇ ಬಾರಿಗೆ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದೆ.
ಉಳಿದಂತೆ ಕಾಂಗ್ರೆಸ್ 35, ಐಎನ್‌ಎಲ್‌ಡಿ 2 ಮತ್ತು ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಬೆಳಗಿನ ಆರಂಭಿಕ ಟ್ರೆಂಡ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಕೂಡಲೇ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜಿಲೇಬಿ ಹಂಚಲು ಪ್ರಾರಂಭಿಸಿದ್ದರೆ, ಹರಿಯಾಣಾ ಕಾಂಗ್ರೆಸ್ ಮುಖಂಡರು ಪಟಾಕಿ ಹೊಡೆಯುತ್ತಾ ವಿಜಯೋತ್ಸವದ ಮೆರವಣಿಗೆ ಪ್ರಾರಂಭಿಸಿದ್ದರು.
ಆದರೆ ಈ ಉತ್ಸಾಹ ತುಂಬಾ ಹೊತ್ತು ಉಳಿಯಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಇಡೀ ಟ್ರೆಂಡ್ ಬದಲಾಗಿದ್ದಷ್ಟೇ ಅಲ್ಲದೇ ಬಿಜೆಪಿ ಹಾಟ್ರಿಕ್ ವಿಜಯ ಸಾಧಿಸಿ ಸರ್ಕಾರ ರಚಿಸುವತ್ತ ಸಾಗಿದೆ.
ಮತ್ತೊಂದೆಡೆ ಬೆಳಗ್ಗೆ ಬಿಜೆಪಿ ಹಿನ್ನಡೆ ಪಡೆದಿದ್ದ ವೇಳೆ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡ ಅವರ ಪೋಟೋ ಬಳಸಿದ್ದ ಕೆಲ ಖಾಸಗಿ ಸುದ್ದಿವಾಹಿನಿಗಳು, ಬಿಜೆಪಿ ಮುನ್ನಡೆ ಕಾಯ್ದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಸುತ್ತಿರುವುದು ವ್ಯಾಪಕ ಟೀಕೆ ಹಾಗೂ ಚರ್ಚೆಗೆ ಕಾರಣವಾಗಿದೆ.