ದೊಡ್ಡಬಳ್ಳಾಪುರ: ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿತು.
ನಗರದ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಜ್ಯೋತಿ ರಥವನ್ನು ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ವಿಜಯಗಳಿಸಿ 200 ವರ್ಷ ಪೂರೈಸಿರುವ ಹಿನಲ್ಲೆಯಲ್ಲಿ ರಾಜ್ಯಾದ್ಯಂತ ನಡೆಯುವ ಕಿತ್ತೂರು ರಾಣಿ ಚೆನ್ನಮ್ಮ ವಿಜಯಯಾತ್ರೆ ನಡೆಯುತ್ತಿದೆ.
1824 ಅಕ್ಟೋಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಸೈನ್ಯದೊಂದಿಗೆ ಕಿತ್ತೂರು ಕೋಟೆಯ ಹೊರಗೆ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಸೋಲಿಸಿದ ದಿನವಾಗಿದೆ.
ಬ್ರಿಟಿಷರ ವಿರುದ್ದ ಮೊದಲ ಮಹಿಳಾ ಹೋರಾಟಗಾರ್ತಿಗೆ 1824ರಲ್ಲಿ ದೊರೆತ ವಿಜಯವಾಗಿದೆ.
1857 ರಲ್ಲಿ ನಡೆದ ಸಿಪಾಯಿ ದಂಗೆಗೂ ಮೊದಲೇ 1824ರಲ್ಲಿ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ಗೆಲುವು ಸಾಧಿಸಿದ ಕಿತ್ತೂರು ರಾಣಿ ಚೆನ್ನಮ್ಮನ ಧೀರತ್ವ ಮತ್ತು ದೇಶಪ್ರೇಮ, ದಕ್ಷ ಆಡಳಿತ ವಿಧಾನ ಎಲ್ಲರಿಗೂ ಆದರ್ಶಪ್ರಾಯ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ತೆರಿಗೆ ಕೊಡುವುದಿಲ್ಲ ಎಂದು ಹೇಳುವ ಮೂಲಕ ನಮಗೆ ಸ್ವಾಭಿಮಾನ ಪ್ರದರ್ಶನ ಮಾಡಿದರು. ಸಂಗೊಳ್ಳಿ ರಾಯಣ್ಣ ಅಂತಹ ಸ್ವಾತಂತ್ರ್ಯ ಸೇನಾನಿ ಕಿತ್ತೂರು ರಾಣಿ ಚೆನ್ನಮ್ಮನ ರಾಜ್ಯದಲ್ಲಿ ಇದ್ದರು.
ಮಹಿಳೆಯರು ಘನತೆ ಮತ್ತು ನ್ಯಾಯವನ್ನು ಕಾಪಾಡುವುದರಲ್ಲಿ ಮುಂಚೂಣಿಯಲ್ಲಿರಬಹುದು ಎಂಬುದನ್ನು ತೋರಿಸಿಕೊಟ್ಟರು. ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ದೇಶದ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಇಂತಹ ವೀರ ಮಹಿಳೆಯ ನೆನಪಿನಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಪ್ರತಿವರ್ಷ ಕಿತ್ತೂರು ಉತ್ಸವ ನಡೆಯುತ್ತದೆ.
ಈ ವರ್ಷ ಕಿತ್ತೂರು ವಿಜಯಕ್ಕೆ 200 ವರ್ಷ ಆಗಿರುವ ಪ್ರಯುಕ್ತ ಅಕ್ಟೋಬರ್ 23, 24, 25ರಂದು ಕಿತ್ತೂರಿನಲ್ಲಿ ವಿಜಯೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್, ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಸಫೀರ್, ಕಾಡನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಮಧುಸೂದನ್, ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದಿಂದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿಗೆ ಕಳುಹಿಸಿ ಕೊಡಲಾಯಿತು.