ಬೆಂಗಳೂರು: ಬೇರೆಯವರಂತೆ ತಲೆಹಿಡುಕ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಅದರ ಅಗತ್ಯವೂ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿದೆ ಎಂದು ಬಿ.ವೈ.ವಿಜಯೇಂದ್ರ (BY Vijayendra) ಹೇಳಿದರು.
ಶಿಕಾರಿಪುರ ಕ್ಷೇತ್ರದ ಮುಖಂಡರ ಜತೆಗೂಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸೋಮವಾರ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೆಲವರು ಸ್ವಂತ ಕೆಲಸಗಳಿಗಾಗಿ ಲೆಟರ್ ಹೆಡ್ ಹಿಡಿದುಕೊಂಡು ಮುಖ್ಯಮಂತ್ರಿ, ಮಂತ್ರಿ ಬಳಿ ಓಡಾಡುತ್ತಾರೆ. ನಾನಂತೂ ಆ ಕೆಲಸ ಮಾಡುವುದಿಲ್ಲ ಎಂಬ ಬಸನಗೌಡ ಪಾಟೀಲ ಯತ್ನಾಳ್ ಟೀಕೆಗೆ BY Vijayendra ಉತ್ತರಿಸಿದರು.
ಶಾಸಕನಾಗಿ ಪ್ರತಿನಿಧಿಸುವ ಕ್ಷೇತ್ರದ ಜನರ ಕುಂದುಕೊರತೆಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಶಿಕಾರಿಪುರ ಕ್ಷೇತ್ರದ ಕುಟ್ರಳ್ಳಿ ಟೋಲ್ ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸ್ಥಳಾಂತರಿಸಲು ಮನವಿ ಮಾಡಲು ಮುಖಂಡರ ಜತೆ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ಹೇಗೆ ನಡೆದುಕೊಳ್ಳಬೇಕು, ಏನು ಮಾಡಬೇಕು ಎಂದು ಗೊತ್ತಿದೆ. ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ, ಅವರೂ ಹೇಳಿಕೊಡಬೇಕಾಗಿಲ್ಲ.
ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಹೇಗೆ ನಡೆದುಕೊಂಡರು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಅವರ ಮಗನಾಗಿ ನಾನು ಬಲ್ಲವನಾಗಿದ್ದು, ಬೇರೆಯವರು ಪಾಠ ಹೇಳಬೇಕಾಗಿಲ್ಲ ಎಂದು BY Vijayendra ಚಾಟಿ ಬೀಸಿದರು.
ಕಾಂಗ್ರೆಸ್ ನ ಆಂತರಿಕ ಬೆಳವಣಿಗೆಗೂ ಸತೀಶ ಜಾರಕಿಹೊಳಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಕ್ಷೇತ್ರದ ಸಮಸ್ಯೆ ಹೊರತಾಗಿ ರಾಜಕೀಯ ವಿಷಯದ ಬಗ್ಗೆ ಚರ್ಚಿಸಿಲ್ಲ ಎಂದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲೇ ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಜಯಮುತ್ತು ಘೋಷಣೆ ಬಗ್ಗೆ ಬಿ.ವೈ.ವಿಜಯೇಂದ್ರ ಉತ್ತರಿಸಿ, ಯಾರು ಏನು ಹೇಳಿದ್ದಾರೆ ಅನ್ನೋದಕ್ಕಿಂತ ಕುಮಾರಸ್ವಾಮಿ ಏನು ಹೇಳಿದ್ದಾರೆ ಅನ್ನೋದು ಮುಖ್ಯವೆಂದರು.
ಅಭ್ಯರ್ಥಿ ಯಾರಾಗಬೇಕು ಎಂದು ಕುಮಾರಸ್ವಾಮಿ, ನಾವು, ರಾಷ್ಟ್ರೀಯ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ರಾಷ್ಟ್ರೀಯ ನಾಯಕರು ತೀರ್ಮಾನವೇ ಅಂತಿಮ. ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೂ ಗೆಲ್ಲುವ ಸಾಧ್ಯತೆ ಇದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನ ಬಿಟ್ಟು ರಾಜೀನಾಮೆ ನೀಡಬೇಕು ಎಂಬ ನಮ್ಮ ಒತ್ತಾಯದ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅದೇನು ಪ್ಲಾನ್ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿದ್ದಾರೆ. ಫೋಟೊದಲ್ಲಿ ಬಿಲ್ಡಿಂಗ್ ನಕ್ಷೆ ಮಾತ್ರ ಕಾಣುತ್ತಿದ್ದು, ಅದೇನು ಪ್ಯಾನ್ ಮಾಡಿದ್ದಾರೋ ತಿಳಿಯದು ಎಂದು ವಿಜಯೇಂದ್ರ ಹೇಳಿದರು.