ಹುಬ್ಬಳ್ಳಿ: ಕೇಂದ್ರ ಸರ್ಕಾರದ ಏಜೆನ್ಸಿ ವೈಫಲ್ಯದಿಂದ ಪಾಕಿಸ್ತಾನದವರು ರಾಜ್ಯದಲ್ಲಿ ಕಂಡು ಬರುತ್ತಿದ್ದಾರೆ. ಅವರು ಇಲ್ಲಿಗೆ ಬಂದಿದ್ದು ಗೊತ್ತಾಗಿದ್ದರಿಂದ ರಾಜ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ (Parmeshwar) ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಹತ್ತಿರ ಹಲವಾರು ತನಿಖಾ ಏಜೆನ್ಸಿಗಳಿವೆ. ಪಾಕಿಸ್ತಾನದವರು ಇಲ್ಲಿಗೆ ಬಂದು ಪಾಸ್‌ಪೋರ್ಟ್ ಮಾಡಿಸಿ ಕೊಂಡಿದ್ದಾರೆ ಎಂದರೆ ಯಾರು ಹೊಣೆ. ರಾಜ್ಯದಲ್ಲಿ ಇನ್ನೂ ಕೆಲವರು ಇದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.
ನಾವು ಯಾರೊಂದಿಗೆ ಸೇಡಿನ ರಾಜ ಕಾರಣ ಮಾಡುತ್ತಿಲ್ಲ, ಯಾರು ದೂರು ನೀಡುತ್ತಾರೋ ಆ ಹಿನ್ನೆಲೆ ತನಿಖೆ ಮಾಡಲಾಗುತ್ತಿದೆ. ಇದರಲ್ಲಿ ಏನಾದರೂ ಸತ್ಯಾಂಶ ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತೇವೆ ಎಂದು Parmeshwar ತಿಳಿಸಿದರು.
ಬಿಜೆಪಿ ಅವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸ್ ತನಿಖೆ ನಡೆಯುತ್ತಿದ್ದು, ಸ್ವಲ್ಪ ಕಾಯಬೇಕು. ಇದರಲ್ಲಿ ರಾಜಕಾರಣ ಯಾರು ಮಾಡುತ್ತಿ ದ್ದಾರೆ ಎಂದು ಪ್ರಶ್ನಿಸಿದರು. ಮುಡಾ ಪ್ರಕರಣ ತನಿಖೆ ನಡೆಸಲು ಕೋರ್ಟ್ ಆದೇಶ ನೀಡಿದೆ. ಈ ವಿಚಾರ ಬಿಜೆಪಿ ರಾಜಕೀಯ ಮಾಡುತ್ತಿದೆ. ನಮಗೆ ರಾಜಕಾರಣ ಮಾಡಲು ಬರಲ್ವಾ? ಪ್ರಧಾನಿ ಅವರು ಸಹ ಭಾಷಣದಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಇದು ರಾಜಕಾರಣ ಅಲ್ಲದೇ ಇನ್ನೇನು ಎಂದು ಹರಿಹಾಯ್ದರು.
ಜಾತಿ ಗಣತಿ ವಿಚಾರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂಸಿದ್ದರಾಮಯ್ಯ ಹೇಳಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಆ ಮೇಲೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿಸಿದರು. ಶಾಸಕ ಜಿ.ಟಿ.ದೇವೇಗೌಡ ಪ್ರಕರಣ
ದಾಖಲಾದವರು ರಾಜೀನಾಮೆ ನೀಡಲಿ ಎಂದಿದ್ದಾರೆ. ಅವರು ಕಾಂಗ್ರೆಸ್ ಬರುವ ವಿಚಾರ ಗೊತ್ತಿಲ್ಲ ಎಂದು ಹೇಳಿದರು. ಸಚಿವ ಸತೀಶ ಜಾರಕಿಹೊಳಿ ಅವರ ಮಗಳು ಸಂಸದೆ ಇರುವುದರಿಂದ ಕ್ವಾಟ್ರಸ್ ಪಡೆಯಲು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಲು ದೆಹಲಿಗೆ ಹೋಗಿದ್ದರು. ಈ ಬಗ್ಗೆ ಅವರು ಮೊದಲೆ ನನ್ನ ಮುಂದೆ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.