ದೊಡ್ಡಬಳ್ಳಾಪುರ: ನಗರದಲ್ಲಿ ದಸರಾ (Dasara) ಬೊಂಬೆಗಳ ಪ್ರದರ್ಶನ,ಪೂಜೆ ಪ್ರಾರಂಭವಾಗಿದ್ದು ಪ್ರತಿ ದಿನ ಸಂಜೆ ಬೊಂಬೆಗಳನ್ನು ಕೂರಿಸಿರುವ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಮಹಾಲಯ ಅಮವಾಸೆ ಮುಗಿದ ಮರುದಿನ ಪಾಡ್ಯಮಿಯಂದು ಕಳಶ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗುವ ಬೊಂಬೆಗಳ ಸಂಭ್ರಮ 9 ದಿನಗಳ ಕಾಲವು ಪ್ರತಿದಿನ ಸಂಜೆ ವಿಶೇಷ ಪೂಜೆ, ನೈವೇದ್ಯ ಹಾಗೂ ನೆರೆಹೊರೆ ಮನೆಯರವನ್ನು ಆಹ್ವಾನಿಸಿ ಉಡುಗೊರೆ ನೀಡಲಾಗುತ್ತದೆ.
ಹಾಗೆಯೇ ಬೊಂಬೆಗಳ ಪ್ರದರ್ಶನ ವೀಕ್ಷಣೆ ಮಾಡಲು ಮನೆಗೆ ಬರುವ ಮಕ್ಕಳು ಸೇರಿದಂತೆ ಎಲ್ಲರಿಗೂ ಪ್ರಸಾದ ನೀಡಲಾಗುತ್ತದೆ.
ನಗರದ ಬಹುತೇಕ ಕುಟುಂಬಗಳಲ್ಲಿನ ಬೊಂಬೆ ಕೂರಿಸುವ ಸಂಭ್ರಮ ಎರಡು ಮೂರು ತಲೆಮಾರುಗಳಿಂದಲು ನಡೆದುಕೊಂಡು ಬಂದಿದ್ದು, ಅಷ್ಟೇ ಹಳೇಯದಾದ ಬೊಂಬೆಗಳ ಸಂಗ್ರಹದಿಂದ ಈಗಿನ ದಿನಗಳಲ್ಲಿನ ಬೊಂಬೆಗಳನ್ನು ಕಾಣಬಹುದಾಗಿದೆ.
ಸೋಮಣ್ಣ ಲೇಔಟ್ ನಲ್ಲಿರುವ ರೇಖಾ ಹರ್ಷ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿವಿಧ ರೀತಿಯ Dasara ಬೊಂಬೆಗಳ ಸಂಗ್ರಹ ಇದ್ದು, ಅಷ್ಟೇ ಅಚ್ಚುಕಟ್ಟಾಗಿ ಕೂರಿಸಿರುವುದು ನೋಡುಗರ ಗಮನ ಸೇಳೆಯುತ್ತಿದೆ. ಬೊಂಬೆಗಳ ಪ್ರದರ್ಶನ ವಿಜಯದಶಮಿಯವರೆಗೂ ಇರಲಿದೆ.
ಇವರು ತಮಿಳುನಾಡಿನ ಕಲಾವಿದರಿಂದ ಭೂದೇವಿ ಮತ್ತು ಪದ್ಮಾವತಿಯೊಂದಿಗೆ ಶ್ರೀನಿವಾಸ ಮೂರ್ತಿಯನ್ನು ದಸರಾ ಹಬ್ಬಕ್ಕೆಂದು ತಯಾರಿಸಿಕೊಂಡು ಬಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬೊಂಬೆ ಕೂರಿಸುವ ಆಚರಣೆ ಪಾಲಿಸುತ್ತಿದ್ದು, ಜೀವನದಲ್ಲಿ ಹಲವು ರೀತಿಯ ಉತ್ತಮ ಅನುಕೂಲಕರ ಬದಲಾವಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಅಂತೆಯೇ ನಗರದ ಗಾಣಿಗರಪೇಟೆಯಲ್ಲಿನ ವಿದ್ವಾನ್ ಎಸ್.ನವೀನ್ ಅವರ ಮನೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಬೊಂಬೆಗಳನ್ನು ಕೂರಿಸಿದ್ದು ಲಕ್ಷ್ಮೀ ಸಮೇತ ನರಸಿಂಹಸ್ವಾಮಿಯ ದರ್ಬಾರ್ ಪ್ರಸಂಗ ನೋಡುಗರ ಕಣ್ಮನ ಸೇಳೆಯುವಂತಿದೆ.
ಹಾಗೆಯೇ ಹಳ್ಳಿಯಲ್ಲಿನ ದಿನ ಬಳಕೆ ಪರಿಕರಗಳ ಬೊಂಬೆ ಪ್ರದರ್ಶನವು ಗ್ರಾಮೀಣ ಜೀವನವನ್ನು ನಗರದ ಜನರು ಬೆರಗು ಗಣ್ಣಿನಿಂದ ನೋಡುವಂತಿದೆ.