ಬೆಂಗಳೂರು: ಮದುವೆಯಾಗುವಂತೆ ಸೀರಿಯಲ್ ನಟಿ ಪೀಡಿಸುತ್ತಿದ್ದಳೆಂಬ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಿಳ್ಳಹಾನಹಳ್ಳಿ ನಿವಾಸಿ ಮದನ್ (25) ದುರ್ದೈವಿ.
ಸೀರಿಯಲ್ ನಟಿ ವೀಣಾ ಎಂಬಾಕೆ ಜತೆಗೆ ಮದನ್ ಲಿವಿಂಗ್ ರಿಲೇಶನ್ ಶಿಪ್ (ಸಹ ಜೀವನ)ದಲ್ಲಿದ್ದ. ಮಂಗಳವಾರ ರಾತ್ರಿ ಇಬ್ಬರೂ ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ನಂತರ ಮದನ್ ಜತೆಗೆ ವೀಣಾ ಮದುವೆ ವಿಷಯ ಪ್ರಸ್ತಾಪಿಸಿದ್ದಳು.
ಮದನ್ ಇವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಡೆಕೋರೇಟ್ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಸೀರಿಯಲ್ ಸೆಟ್‌ಲ್ಲಿ ಕಾಣಿಸಿಕೊಂಡಿದ್ದ ವೀಣಾಳನ್ನು ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಸಲುಗೆ ಬೆಳೆಸಿಕೊಂಡು ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ವೀಣಾ ಕನ್ನಡತಿ ಸೀರಿಯಲ್ ಹಾಗೂ ಕೆಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಳು.
ಯುವಕನ ಮೇಲೆ ಒತ್ತಡ ಹೆಚ್ಚಿಸಿದ್ದ ನಟಿ: ಬೆಂಗಳೂ ರಿನ ಸಿ.ಕೆ.ಪಾಳ್ಯ ರಸ್ತೆಯಲ್ಲಿರುವ ಸಾಯಿ ಸಮೃದ್ಧಿ ಲೇಔಟ್‌ನಲ್ಲಿರುವ ಮನೆಯಲ್ಲಿ ವೀಣಾ ಒಂಟಿಯಾಗಿ ವಾಸವಿದ್ದಳು. ಹೀಗಿದ್ದವಳಿಗೆ ಒಂದು ವರ್ಷದ ಹಿಂದೆ ಅದ್ದೇಗೊ ಈ ಮದನ್ ಪರಿಚಯವಾಗಿದೆ. ಅದೇ ಪರಿಚಯ ಸ್ನೇಹವಾಗಿ ಬೆಳೆದಿದ್ದು, ವೀಣಾ, ಮದನ್ ನನ್ನು ಪ್ರೀತಿಸುವಂತೆ ಕಿರುಕುಳ ಕೊಟ್ಟು ಆಗಾಗ ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದಳು. ವೀಣಾ ಎಷ್ಟೇ ಒತ್ತಾಯಿಸಿದರೂ ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಹಾಗಾಗಿ ಮಾನ ಹರಾಜು ಹಾಕುವೆ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು. ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳು. ಜತೆಗೆ ಬ್ರೇಡ್‌ನಿಂದ ಕೈ ಕೊಯ್ದುಕೊಳ್ಳುತ್ತಿದ್ದಳು.
ಮಂಗಳವಾರ ಸಂಜೆ ನಾಲ್ಕು ಗಂಟೆಗೆ ವೀಣಾ, ಮದನ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಕುಡಿದು ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಅದೇ ಕಿರುಕುಳಕ್ಕೆ ಬೇಸತ್ತ ಮದನ್ ರೂಮ್‌ನಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗನ ಸಾವಿಗೆ ವೀಣಾ ಕಾರಣ. ಅವನಿಗೆ ಇಷ್ಟವಿಲ್ಲದಿದ್ದರೂ ಮದುವೆ ಯಾಗುವಂತೆ ಒತ್ತಾಯಿಸುತ್ತಿದ್ದುದರಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ನಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಲ್ಲದೆ, ಯುವತಿ ಹಲವು ಯುವಕರಿಗೆ ಮದುವೆ ಆಗುವುದಾಗಿ ವಂಚಿಸಿದ್ದಾಳೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಅನುಮಾನ ಸೃಷ್ಟಿಸಿದ ಸಾವು: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಳಿಮಾವು ಠಾಣೆ ಪೊಲೀಸರು ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಿಳೇಕಹಳ್ಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಮದನ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆ ಬಳಿಕ ಮದನ್ ಸಾವಿನ ಅಸಲಿ ಕಾರಣ ಗೊತ್ತಾಗಲಿದೆ. ಮದನ್ ತಾಯಿ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದ್ದರೆ, ಜತೆಗೆ ವೀಣಾ ಮೇಲೆ ಜಾತಿನಿಂದನೆ ಪ್ರಕರಣ ಕೂಡ ದಾಖಲಾಗಿದೆ.