ಬೆಂಗಳೂರು: ಮುಡಾ ನಿವೇಶನ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರು ನಿವೇಶನ ಹಿಂದಿರುಗಿಸಿರುವುದನ್ನು ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಇದೀಗ ಇದೇ ರೀತಿಯಲ್ಲಿ ಈ ಹಿಂದೆ ಆರ್.ಅಶೋಕ ಬಿಡಿಎಗೆ ಸೈಟು ಮರಳಿಸಿರುವ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ, ಕಾಂಗ್ರೆಸ್ ಪ್ರತ್ಯಾಸ್ತ್ರ ಹೂಡಿದೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರತಿಪಕ್ಷದ ನಾಯಕರು ‘ತಪ್ಪು ಮಾಡಿರುವ ಕಾರಣ ನಿವೇಶನ ವಾಪಸ್ ನೀಡಿದ್ದೀರಿ’ ಎಂದು ಬೇರೆ ಅರ್ಥ ಕಲ್ಪಿಸಿ ಆರೋಪ ಮಾಡಿದ್ದಾರೆ. ಆದರೆ, ಅವರೇ ಈ ರೀತಿ ಹಲವು ತಪ್ಪು ಮಾಡಿ, ಈಗ ಏನೂ ನಡೆದಿಲ್ಲವೆಂಬಂತೆ ನಾಟಕವಾಡಿದ್ದಾರೆಂದು ಅಶೋಕ ವಿರುದ್ಧ ಕಾಂಗ್ರೆಸ್‌ನ ಹಿರಿಯ ಸಚಿವರು ದಾಖಲೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಈ ಸಂಬಂಧಿತ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣದ ನಡೆದಿದೆ.
ಸರ್ವೆ ನಂಬರ್ 10/1, 10/11 21 8 10/11 ಎಫ್2 ಜಾಗದಲ್ಲಿ 32 ಗುಂಟೆ ಜಮೀನನ್ನು ಬಿಡಿಎ 24-02-1977ರಲ್ಲಿ ಬಿಡಿಎ ನೋಟಿಫಿಕೇಶನ್ ಮಾಡಿದೆ. 27-2-1977ರಲ್ಲಿ ಮತ್ತೊಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾ ಗುತ್ತದೆ. 31-8-1978ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.
ನಂತರ 26-02-2003 ಹಾಗೂ 2007ರಲ್ಲಿ ಜಮೀನಿನ ಮೂಲ ಮಾಲೀಕರಾದ ರಾಮಸ್ವಾಮಿ ಅವರಿಂದ ಆರ್.ಅಶೋಕ ಈ ಜಮೀನನ್ನು ಶುದ್ದ ಕ್ರಯದ ಮೂಲಕ ಖರೀದಿ ಮಾಡುತ್ತಾರೆ. ಈ ವೇಳೆ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ‘ಕೂಡಲೇ ಮಂಡಿಸಿ’ ಎಂದು ಬರೆಯುತ್ತಾರೆ. ನಂತರ ಕಡತ ಮಂಡನೆಯಾದ ಎರಡು ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗುತ್ತದೆ ಎಂದು ಆರೋಪಿಸಿದರು.
ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ.ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್.ಅಶೋಕ ಈ ಜಮೀನು ಹಿಂತಿರು ಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ. ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ ನಂತರ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ, ‘ಈ ಭೂಮಿ ಬಿಡಿಎ ಅಧೀನದಲ್ಲಿರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲ’ ಎಂದು ತೀರ್ಪು ನೀಡುತ್ತಾರೆ. ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದಕ್ಕೆ ನೀವು ಆಡುತ್ತಿರುವ ಮಾತುಗಳು ಹಾಗೂ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ, ಇದರ ಬಗ್ಗೆ ಜನರಿಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಈ ಜಾಗ ಡಾಲರ್ಸ್ ಕಾಲೋನಿ 2ನೇ ಹಂತದ ಆರ್‌ಎಂವಿ ಬಡಾವಣೆ ಹಾಗೂ ವರ್ತುಲ ರಸ್ತೆ ಬಳಿ ಇದೆ. ಈ ಪ್ರದೇಶ ಬಿಡಿಎ 1977 ಹಾಗೂ 1978ರಲ್ಲಿ ವಶಕ್ಕೆ ಪಡೆದಿತ್ತು. ಈ ಜಾಗ ವರ್ತುಲ ರಸ್ತೆಗೆ ಮುಖವಾಗಿದೆ. ಹೀಗಾಗಿ ಈ ಜಮೀನಿನ ಮೌಲ್ಯ ಕೋಟ್ಯಂತರ ರುಪಾಯಿಯಾಗಿದೆ. 2003ರಲ್ಲಿ ಆರ್.ಅಶೋಕ ಶುದ್ದ ಕ್ರಯ ಹೇಗೆ ಮಾಡಿಕೊಂಡರು? ಇಷ್ಟು ದಿನ ಅಕ್ರಮವಾಗಿ ಜಿಪಿಎ ಮಾಡಿಕೊಂಡಿರುವುದನ್ನು ಕೇಳಿದ್ದೆ.
ಆದರೆ ಮೊದಲ ಬಾರಿಗೆ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಶುದ್ದ ಕ್ರಯ ಮಾಡಿಕೊಂಡಿರುವ ಪ್ರಕರಣ ನೋಡುತ್ತಿದ್ದೇನೆ. ಬಿಡಿಎ ಸ್ವತ್ತನ್ನು ಖಾಸಗಿ ಅವರಿಂದ ಹೇಗೆ ಖರೀದಿ ಮಾಡಿದರು? ಬಿಡಿಎ ಬಳಿ ಖಾತಾ ಇರುವಾಗ ಗುಳ್ಳಮ್ಮ ಅವರ ವಾರಸುದಾರರಿಂದ ಹೇಗೆ ಖರೀದಿ ಮಾಡಿದರು? ಎಂದು ಪ್ರಶ್ನಿಸಿದರು. ಅಲ್ಲದೆ, ಬಿಜೆಪಿ ಸರಕಾರದ ಅವಧಿಯಲ್ಲಿ ರಾಮಸ್ವಾಮಿ ಬಿನ್ ವೆಂಕಟಪ್ಪ ಎಂಬುವವರ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಬೇಕು ಎಂದು ಅರ್ಜಿ ನೀಡುತ್ತಾರೆ. 18-11-2009ರಂದು ಆಗಿನ ಸಿಎಂ ಯಡಿಯೂರಪ್ಪ ಅವರು ಬಿಡಿಎ ಆಯುಕ್ತರು ಕೂಡಲೇ ಕಡತದಲ್ಲಿ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಅದೇ ವರ್ಷ ಡಿಸೆಂಬರ್ 31ಕ್ಕೆ ಅಂದರೆ ಒಂದು ತಿಂಗಳು 12 ದಿನಗಳ ಅಂತರದಲ್ಲಿ ಡಿನೋಟಿಫಿಕೇಷನ್ ಮಾಡುತ್ತಾರೆ. ಸರಕಾರಿ ಜಾಗ 23 ವರ್ಷಗಳ ನಂತರ ಡಿನೋಟಿಫಿಕೇಷನ್ ಮಾಡಿರುವುದು ಅಕ್ರಮ ಎಂದರು.
ಶುದ್ದ ಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬುವವರ ವಾರಸುದಾರರು ಯಾರು ಎಂದು ನೋಡಿದರೆ, ವಾರಸುದಾರರು ಜಿ.ಶಾಮಣ್ಣ, ಜಿ.ಮುನಿರಾಜು, ಜಿ.ಗೋವಿಂದಪ್ಪ, ಜಿ. ಕಾಂತರಾಜು, ಜಿ.ಸುಬ್ರಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬುವವರಿಗೆ ಗುಳ್ಳಮ್ಮ ಎಂಬುವವರು ಹೇಗೆ ಸಂಬಂಧ ಎಂದು ಗೊತ್ತಿಲ್ಲ. ನನ್ನ ಪ್ರಕಾರ ರಾಮಸ್ವಾಮಿ ದಾರಿಯಲ್ಲಿ ಹೋಗುವ ದಾಸಯ್ಯ ಎಂದು ನನಗೆ ಮೇಲ್ನೋಟಕ್ಕೆ ಕಾಣುತ್ತಿದೆ. ದಾರಿಯಲ್ಲಿ ಹೋಗುವವರಿಂದ ಅರ್ಜಿ ಪಡೆದು ಕೋಟ್ಯಂತರ ರುಪಾಯಿ ಮೌಲ್ಯದ ಜಮೀನು ಡೈನೋಟಿಫೈ ಮಾಡುತ್ತೀರಿ. ಈ ಬೇನಾಮಿ ರಾಮಸ್ವಾಮಿ ಎಲ್ಲಿಂದ ಬಂತು? ಎಂದು ಅಶೋಕ ಅವರನ್ನು ಪ್ರಶ್ನಿಸಿದ್ದಾರೆ.
ಯಾವುದೇ ತಪ್ಪು ಮಾಡಿಲ್ಲದಿದ್ದರೂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿ, ಬಿಜೆಪಿಯ ಅಸ್ತದಂತೆ ಇರುವ ಇ.ಡಿ ಸಂಸ್ಥೆ ಪ್ರಯೋಗಿಸುತ್ತಾರೆ. ಹೀಗಾಗಿ ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ ಅವರು ಪ್ರತಿಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತರಿದ್ದರು.