ಬೆಂಗಳೂರು: ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ ಟಾಟಾ ಅವರು ನೀಡಿದ ದೂರಿನಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇದೀಗ ಸುಲಿಗೆ ಹಾಗೂ ಜೀವ ಬೆದರಿಕೆ ಆರೋಪದಡಿ FIR ದಾಖಲಾಗಿದೆ.
ಇದಲ್ಲದೇ ಜೆಡಿಎಸ್‌ನ ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ ಅವರ ವಿರುದ್ಧವೂ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇಂದು ಬೆಳಗ್ಗೆ ಅಮೃತಹಳ್ಳಿ ಪೊಲೀಸರು ಆರೋಪ ಸಂಬಂಧ ಎನ್‌ಸಿಆರ್ ದಾಖಲಿಸಿದ್ದು ಇದೀಗ ಕೋರ್ಟ್ ಅನುಮತಿ ಪಡೆದು BNS-2023ರ ಪ್ರಕಾರ, ಸೆಕ್ಷನ್ 3(5), 308 (2), 351 (2) ಸೆಕ್ಷನ್ ಅಡಿ ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ವಿಜಯ್ ಟಾಟಾ ಆರೋಪಿಸಿದ್ದರು.
ಜೆಡಿಎಸ್ ಮುಖಂಡ ರಮೇಶ್ ಗೌಡ ಮನೆಗೆ ಬಂದು, ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದಿದ್ದರು. ಅದೇ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ಕಾಲ್ ಮಾಡಿ ಎಲೆಕ್ಷನ್‌ಗಾಗಿ 50 ಕೋಟಿ ರೂಪಾಯಿ ಹಣ ಕೊಡಿ.
ಇಲ್ಲದಿದ್ದರೆ ನಿಮ್ಮ ಪ್ರಾಜೆಕ್ಟ್ ಕಂಪ್ಲಿಟ್ ಮಾಡುವುದಕ್ಕೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದರು ಎಂಬುವುದು ಟಾಟಾ ಅವರ ಆರೋಪ. ಇದಲ್ಲದೇ ದೇವಸ್ಥಾನ ಕಟ್ಟಲು ರಮೇಶ್ ಗೌಡ ಸಹ 5 ಕೋಟಿ ರೂಪಾಯಿಯನ್ನು ಕೇಳಿದ್ದಾಗಿಯೂ ಟಾಟಾ ಗಂಭೀರ ಆರೋಪ ಮಾಡಿದ್ದರು.
ಎಫ್‌ಐಆರ್‌ನಲ್ಲಿ ಕುಮಾರಸ್ವಾಮಿ ಅವರನ್ನು A2 ಹಾಗೂ ರಮೇಶ್ ಗೌಡ ಅವರನ್ನು A1 ಆರೋಪಿಯನ್ನಾಗಿಸಲಾಗಿದೆ.