ಮೈಸೂರು; ಮೂಡಾ ಹಗರಣದ ಆರೋಪದ ಕುರಿತು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಕಮಲ-ದಳ ಮೈತ್ರಿ ಒತ್ತಾಯಿಸುತ್ತಿದ್ದ, ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೊಡುವುದಾದರೆ ಎಫ್ಐಆರ್ ಆಗಿರುವ ಎಲ್ಲಾ ನಾಯಕರೂ ರಾಜೀನಾಮೆ ಕೊಡಲಿ ಎನ್ನುವ ಮೂಲಕ ಮೈತ್ರಿ ಪಡೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಟಿಡಿ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿಯ ವರಪುತ್ರರೂ ಹೌದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಕಾರಣ ಎಂದು ಹೇಳಿದರು.
ಎಂತಹ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನು ಸೋಲಿಸಲು ನಾವು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆ ಚುನಾವಣೆಯಲ್ಲಿ ಗೆದ್ದರು ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿದ್ದರಾಮಯ್ಯಗೆ ಇದೆ.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೊಡುವುದಾದರೆ ಎಫ್ಐಆರ್ ಆಗಿರುವ ಎಲ್ಲಾ ನಾಯಕರೂ ರಾಜೀನಾಮೆ ಕೊಡಲಿ. ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ ಎಂದು ರಾಜ್ಯಪಾಲ ಹಾಗೂ ಮೈತ್ರಿ ನಾಯಕರ ವಿರುದ್ಧ ಸಮಾರಂಭದಲ್ಲಿ ಜಿ.ಟಿ ದೇವೇಗೌಡ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ. ಈಗ ಎಲ್ಲಾ ಗಾಜಿನ ಮನೆಯಲ್ಲಿ ಕುಳಿತ್ತಿದ್ದಾರೆ. ಎಫ್ಐಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್ನಲ್ಲಿ ಇರುವರು ಕೊಡಲಿ. ರಾಜೀನಾಮೆ ಕೊಡು ಅಂತ ಕೋರ್ಟ್ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಯಾರ ಯಾರ ಮೇಲೆ ಎಫ್ಐಆರ್ ಆಗಿದೆಯೋ ಅವರೆಲ್ಲ ರಾಜೀನಾಮೆ ಕೊಡಲಿ. ಎಲ್ಲರೂ ವಿಧಾನಸೌಧದ ಮುಂದೆ ನಿಂತುಕೊಳ್ಳಿ. ಕೇಂದ್ರದಿಂದ ರಾಜ್ಯಕ್ಕೆ ಏನೇನು ಅನುದಾನ ತರಬೇಕು ಅದನ್ನು ನೋಡಿ. ಅದು ಬಿಟ್ಟು ಬರೀ ರಾಜೀನಾಮೆ ರಾಜೀನಾಮೆ ಕೇಳುತ್ತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜೀನಾಮೆ ಕೊಡಬೇಕಂತೆ ರಾಜೀನಾಮೆ. ಮಾಡೋಕೆ ಬೇರೆ ಕೆಲಸ ಇಲ್ವ? ಏನು ಅಭಿವೃದ್ಧಿ ಕಾರ್ಯ ಆಗಬೇಕೋ ಅದನ್ನು ನೋಡಿ. ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ.. ತಾಕತ್ತಿದ್ದರೆ ಎಲ್ಲರೂ ಬನ್ನಿ. ಯಾರ ಮೇಲೆ ಎಫ್ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ವಿಧಾನಸೌಧದ ಮುಂದೆ ಸಾಲಾಗಿ ಬಂದು ರಾಜೀನಾಮೆ ಕೊಡಿ, ಕೊಡ್ತೀರಾ? ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನೂ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಸಿದ್ದರಾಮಯ್ಯ ಎನ್ನುತ್ತ ಸಿಎಂ, ಡಿಸಿಎಂ ಹಾಗೂ ಸಚಿವ ಮಹದೇವಪ್ಪರನ್ನು ಹಾಡಿ ಹೊಗಳಿದರು.
ನಾನು ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ; ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ‘ಮೈಸೂರಿನವ್ರು ತೊಂದರೆಯಲ್ಲಿ ಸಿಲುಕಬಾರದೆಂದು ಹೇಳಿರಬಹುದು.
ಸಿಎಂ ಪರ ಮಾತಾಡಲಿ ಬಿಡಿ, ಏಕೆ ಅವರ ಪರ ಮಾತಾಡಬಾರದು. FIR ದಾಖಲಾಗಿದ್ದಕ್ಕೆ ನಾನು ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ರಾಜೀನಾಮೆ ಕೇಳಿದ್ದೆ ಅಷ್ಟೇ.
ನನ್ನ ಮೇಲೆ ಏನೋ ಮಾಡುವುದಕ್ಕೆ ಹೊರಟಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿರುವುದು ಏನು?, ಸುಳ್ಳು ವರದಿ ಬರ್ತಿದೆ, ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂದರು.
ಇದನ್ನೂ ಓದಿ; ನಾನು ತಪ್ಪಿತಸ್ಥನೆಂದು ನ್ಯಾಯಾಲಯ ಮತ್ತು ರಾಜ್ಯಪಾಲರು ಎಲ್ಲೂ ಹೇಳಿಲ್ಲ: ಆರ್.ಅಶೋಕ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ ಅಂತಾ ಹೇಳುತ್ತಾರೆ. ಏನು ತಪ್ಪು ಮಾಡಿಲ್ಲ ಅಂತೀರಾ, ರಾಜಕೀಯ ಮಾತಾಡಲು ವೇದಿಕೆನಾ ಎಂದು ಪ್ರಶ್ನಿಸಿದ್ದಾರೆ. ರಾಜಕಾರಣಿಗಳ ತೆವಲು ತೀರಿಸಿಕೊಳ್ಳುವಂತಹ ವೇದಿಕೆ ಆಗಬಾರದು ಎಂದು ಕಿಡಿಕಾರಿದ್ದಾರೆ.
ನಾನು ಯಾರದೇ ಒಬ್ಬರ ಹೆಸರನ್ನು ಇಲ್ಲಿ ಪ್ರಸ್ತಾಪಿಸಲು ಹೋಗಲ್ಲ. ನಾಡಹಬ್ಬ ದಸರಾ ವೇದಿಕೆ ರಾಜಕೀಯಕ್ಕೆ ಬಳಕೆ ಆಗಿರೋದು ತಪ್ಪು. ಶಾಸಕ ಜಿಟಿ ದೇವೇಗೌಡ ಆಗಿರಬಹುದು ಅಥವಾ ಇನ್ನೊಬ್ಬರು ಆಗಿರಬಹುದು ಅದು ತಪ್ಪು. ಮುಂದಿನ ವರ್ಷ ಯಾವುದೇ ಸರ್ಕಾರ ಆಡಳಿತದಲ್ಲಿ ಇರಲಿ, ರಾಜಕಾರಣಿಗಳಿಗೆ ಅದು ವೇದಿಕೆ ಆಗಬಾರದು ಎಂದು ಹೇಳಿದ್ದಾರೆ.
ಸಿಎಂ ಪ್ರಶಂಸೆ; ಜಿಟಿಡಿ ಮಾತಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿದ್ದು, ಶಾಸಕ ಮಿತ್ರರಾದ ಜಿ.ಟಿ.ದೇವೇಗೌಡರು ಬಹಳ ವರ್ಷಗಳಿಂದ ನನ್ನ ವೈಯಕ್ತಿಕ ಮತ್ತು ರಾಜಕೀಯ ಜೀವನವನ್ನು ಸಮೀಪದಿಂದ ಕಂಡು ಬಲ್ಲವರು. ಕಳೆದ ಹಲವು ವರ್ಷಗಳಿಂದ ಅವರು ಮುಡಾದ ಸದಸ್ಯರೂ ಆಗಿದ್ದಾರೆ.
ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷದಲ್ಲಿರಬಹುದು. ಆದರೆ ಸತ್ಯ ಮತ್ತು ನ್ಯಾಯಕ್ಕೆ ಪಕ್ಷ ಇಲ್ಲ. ಅದು ವ್ಯಕ್ತಿಯ ಆತ್ಮಸಾಕ್ಷಿಗೆ ಸಂಬಂಧಿಸಿದ್ದು ಎಂದಿದ್ದಾರೆ.
ಜಿ.ಟಿ.ದೇವೇಗೌಡರು ಇಂದು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್ ಸಮಾರಂಭದಲ್ಲಿ ಸತ್ಯ ಮಾತನಾಡಿದ್ದಾರೆ.
ನಾನೆಂದೂ ದ್ವೇಷದ ರಾಜಕೀಯ ಮಾಡಿದವನಲ್ಲ, ವಿರೋಧಿ ರಾಜಕಾರಣಿಗಳ ವೈಯಕ್ತಿಕ ಬದುಕು ಇಲ್ಲವೆ, ಅವರ ಕುಟುಂಬವನ್ನು ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡವನಲ್ಲ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿರುವ ಅನೇಕ ನಾಯಕರಿಗೆ ಜಿ.ಟಿ.ದೇವೇಗೌಡರು ಹೇಳಿರುವ ಸತ್ಯ ಗೊತ್ತಿದೆ. ಆದರೆ ತಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಒತ್ತಡಕ್ಕೆ ಬಲಿಯಾಗಿ ಮೌನವಾಗಿದ್ದಾರೆ. ಅವರು ಕೂಡಾ ಮುಕ್ತವಾಗಿ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ.
ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕೇ ವಿನ: ಸುಳ್ಳು ಆರೋಪಗಳ ಮೂಲಕ ಹೆಣೆಯುವ ರಾಜಕೀಯ ಷಡ್ಯಂತ್ರದಿಂದ ಅಲ್ಲ.
ಈ ಕೆಟ್ಟ ಪರಂಪರೆಯನ್ನು ತಡೆಗಟ್ಟಬೇಕಾದರೆ ನಮ್ಮ ರಾಜಕೀಯ ನಾಯಕರೆಲ್ಲರೂ ಪಕ್ಷಾತೀತವಾಗಿ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧೈರ್ಯ ಮಾಡಬೇಕಾಗುತ್ತದೆ. ಈ ಮೂಲಕ ಕರ್ನಾಟಕದಿಂದ ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಬೇಕಾಗುತ್ತದೆ. “ಸತ್ಯಮೇವ ಜಯತೆ” ಎಂದಿದ್ದಾರೆ.