ಹರಿತಲೇಖನಿ

ದೊಡ್ಡಬಳ್ಳಾಪುರದ ವಿವಿಧೆಡೆ ಮಹಾತ್ಮ ಗಾಂಧಿ – ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ದೊಡ್ಡಬಳ್ಳಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 166ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿಯನ್ನು ತಾಲೂಕಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಚಿಕ್ಕಪೇಟೆಯ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗಣ್ಯರು ದೇಶಕ್ಕೆ ಗಾಂಧೀಜಿ ಅವರ ತ್ಯಾಗ ಹಾಗೂ ಕೊಡುಗೆಯನ್ನು ಸ್ಮರಿಸಿದರು.

ಮುಬಾರಕ್ ಕ್ರಿಕೆಟ್ ಯೂಥ್ ಸಮಿತಿ; ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ್ ಕಾರ್ಯಕ್ರಮವನ್ನು ಗಾಂಧಿ ವೃತ್ತದಲ್ಲಿ ಏರ್ಪಡಿಸಲಾಗಿತ್ತು.

ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಸಿಹಿ ಹಂಚಿಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಆರ್.ನಾಯ್ಡು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಹರು ಯುವ ಕೇಂದ್ರದ ಅಧಿಕಾರಿ ಶ್ರೀವಾಣಿ, ನಗರಸಭಾ ಸದಸ್ಯ, ತ.ನಾ.ಪ್ರಭುದೇವ, ನಾಗರಾಜ್, ಆನಂದ್ ಕುಮಾರ್, ಹಿರಿಯ ಮುಖಂಡರಾದ ಶಫಿಯುಲ್ಲಾ, ಜಾವೀದ್, ಡಿ.ಕೆ.ಬುವಾ, ಮುಬಾರಕ್ ಕ್ರಿಕೆಟ್ ಯೂಥ್ ಸಮಿತಿಯ ಅಧ್ಯಕ್ಷ ಸೈಯದ್ ಅಬ್ದುಲ್ ರಹಮಾನ್ ಭಾಗವಹಿಸಿದ್ದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಮಹಾತ್ಮ ಗಾಂಧೀಜಿ ಪ್ರತಿಮೆಯ ಆವರಣದಲ್ಲಿ ಹಾಗೂ ಗಾಂಧೀಜಿ ನಗರದ ದ್ವಾರದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಭಾರತೀಯರ ಮನಸ್ಸಿನಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಜನರ ಮನಸೆಳೆಯದವರು. ವಿಶ್ವಸಂಸ್ಥೆ ಮಹಾತ್ಮ ಗಾಂಧೀಜಿ ಜನ್ಮದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪ್ರತಿರೋಧ ಭಾರತ ಸ್ವಾತಂತ್ರ್ಯ ಚಳವಳಿಗೆ ಮಾತ್ರ ಸೀಮಿತವಾಗಲಿಲ್ಲ. ವಿಶ್ವದ ಹಲವು ದೇಶದ ನಾಗರಿಕರಿಗೆ ಮಾನವ ಹಕ್ಕುಗಳು ಮತ್ತು ವಿಮೋಚನಾ ಚಳುವಳಿಗಳ ಮೇಲೆ ಅಳವಾದ ಪ್ರಭಾವ ಬೀರಿತು. ಮಹಾತ್ಮ ಗಾಂಧೀಜಿಯವರು ಮಾನವಹಕ್ಕು, ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟಗಳು ಜಾಗತಿಕ ಮನ್ನಣೆಯನ್ನು ಪಡೆದವು. ಬ್ರಿಟಿಷರ ನಿಯಂತ್ರಣದಿಂದ ಭಾರತವನ್ನು ವಿಮೋಚನೆಗೊಳಿಸಿದ ಹೋರಾಟವನ್ನು ಭಾರತೀಯರು ಎಂದೂ ಮರೆಯಲಾರರು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಮಾಣಿಕತೆ ಮತ್ತು ವಿನಮ್ರತೆ, ಸಹಿಷ್ಣುತೆ ಮತ್ತು ದೃಢನಿಶ್ಚಯವುಳ್ಳ ವ್ಯಕ್ತಿತ್ವ ಹೊಂದಿದ್ದವರು. ಭಾರತವನ್ನು ಪ್ರಗತಿಯೆಡೆಗೆ ಮುನ್ನಡೆಸಿದವರು. ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು.

ಜೈ ಜವಾನ್ ಮತ್ತು ಜೈ ಕಿಸಾನ್ ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಎನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಬಾಲ್ಯದಲ್ಲಿಯೇ ಧೈರ್ಯ, ಸಾಹಸ ಪ್ರೇಮ, ತಾಳ್ಮೆ, ಸ್ವಯಂ ನಿಯಂತ್ರಣ, ಸೌಜನ್ಯ ಮತ್ತು ನಿಸ್ವಾರ್ಥತೆಯಂತಹ ಗುಣಗಳನ್ನು ಬೆಳೆಸಿಕೊಂಡರು ಎಂದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಮಾಜಿ ಖಜಾಂಚಿ ನಂ.ಮಹಾದೇವ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ, ಕೋಶಾಧ್ಯಕ್ಷ ಸಾ.ಲ.ಕಮಲನಾಥ, ಕಸಬಾ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ, ಪ್ರತಿನಿಧಿಗಳಾದ ರಾಜು ಸಣ್ಣಕ್ಕಿ, ಮುನಿರಾಜು, ನಾಗರತ್ನಮ್ಮ, ಸರ್ಫೀ, ಮಶ, ಭಾರತ್ ಸ್ಕೌಟ್ಸ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ಆರ್ಯವೈಶ್ಯ ಮಂಡಲಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸೂರ್‍ಯ ಪದವಿ ಪೂರ್ವ ಕಾಲೇಜು; ನಗರದ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿನ ಶ್ರೀ ಸೂರ್‍ಯ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪ್ರಾಂಶುಪಾಲ ಎಂ.ಸಿ.ಮಂಜುನಾಥ್ ಗಾಂಧೀಜಿ ಅವರ ತ್ಯಾಗ ಬಲಿದಾನ ಆದರ್ಶಗಳನ್ನು ಸ್ಮರಿಸದಿದ್ದರೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಅಪೂರ್ಣ. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್‌ಶಾಸ್ತ್ರಿ ಇರುವ ಅಲ್ಪಾವಧಿಯಲ್ಲಿಯೇ ದೇಶದ ಪ್ರಧಾನಿಯಾಗಿ ಜಗತ್ತಿನ ಗಮನ ಸೆಳೆದಿದ್ದರು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುನೀತ್ ಟಿ, ಶ್ರೀ ಕೃಷ್ಣ, ಚೈತನ್ಯ, ಅಂಜಲಿ ಕುಮಾರಿ ಲಾವಣ್ಯ, ಕುಮಾರಿ ಮಿಥುನ್ ಎಂ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗೇಶ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಗವಹಿಸಿದ್ದರು.

Exit mobile version