ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹಿರಿಯ ಅಧಿಕಾರಿ ಚಂದ್ರಶೇಖರ್ ನಡುವಿನ ‘ಹಂದಿ’ ಗಲಾಟೆ ಇದೀಗ ಹೊಸ ತಿರುವು ಪಡೆದಿದೆ.
ಕುಮಾರಸ್ವಾಮಿ ಅವರ ವಿರುದ್ಧ ಬೆದರಿಕೆ ಹಾಕಿ 50 ಕೋಟಿ ರೂ. ಕೇಳಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿಗೆ ಕಳಂಕ ತರುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆಂದು ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಉಪಾಧ್ಯಕ್ಷ ಎಂದು ಹೇಳಿಕೊಂಡಿರುವ ವಿಜಯ್ ಟಾಟಾ ಬೆಂಗಳೂರಿನ ಪ್ರಸ್‌ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಈ ಆರೋಪದ ಬೆನ್ನಲ್ಲೇ, ವಿಜಯ್ ಟಾಟಾರಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಜೆಡಿಎಸ್ ಜಾಲತಾಣ ನಿರ್ವಹಿಸುವ ಚಂದನ್ ಎಚ್.ಎಸ್ ಎನ್ನುವವರು ಹೇಳಿಕೊಂಡಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಜಯ್ ಟಾಟಾ, ಕೇಂದ್ರ ಸಚಿವ ಕುಮಾರಸ್ವಾಮಿ ನಾನು ಯಾರು ಎಂಬುದೇ ಗೊತ್ತಿಲ್ಲ ಅಂದಿದ್ದಾರೆ. ಇದು ನನಗೆ ತುಂಬಾ ಆಶ್ಚರ್ಯ ಆಗಿದೆ. ನಾನು ಅವರ ಮಗನ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದೆ. ಅಲ್ಲದೆ 2019 ಲೋಕಸಭಾ ಚುಣಾವಣೆಯಲ್ಲಿ ಪಕದ ಪರವಾಗಿ ಕೆಲಸ ಮಾಡಿದೆ ಎಂದು ಈ ಸಂಬಂಧ ದಾಖಲೆಗಳನ್ನು ವಿಜಯ್ ಟಾಟಾ ಪ್ರದರ್ಶಿಸಿದರು.
ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಗಾಗಿ ನಾನು ಈಗಾಗಲೇ ಕೋಟಿಗಟ್ಟಲೇ ಖರ್ಚು ಮಾಡಿದ್ದೇನೆ. ನನ್ನ ಮೇಲೆ ಎರಡು ಸಾವಿರ ದೂರುಗಳಿವೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅದರೆ, ಅವರು ನನ್ನ ಮೇಲಿನ ಎರಡೇ ಎರಡು ದೂರುಗಳನ್ನು ತೋರಿಸಲಿ ಎಂದು ಸವಾಲೆಸೆದರು.
ಪಿಎಸಿಎಲ್ ಕಂಪನಿ ಹೆಸರಲ್ಲಿ ಕೋಟಿಗಟ್ಟಲೇ ಅವ್ಯವಹಾರ ಆಗಿದೆ. ನನ್ನ ಬಳಿ ಶ್ರೀಧರ ಅನ್ನುವ ವ್ಯಕ್ತಿ ಬಂದು ಪಿಎಸಿಎಲ್ ವಿರುದ್ಧ ದೂರು ನೀಡಬೇಕು ಎಂದಿದ್ದ ನಾನು ದೂರು ನೀಡಲು ಸಹಾಯ ಮಾಡಿದ್ದೆ. ಇದರಲ್ಲಿ ಬಂಧನಕ್ಕೆ ಒಳಗಾದವರು ಕುಮಾರಸ್ವಾಮಿ ಹತ್ತಿರ ಹೋಗಿದ್ದರು. ಆದರೆ ನನ್ನ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ ಎಂದರು.
ನನಗೆ ಒಮ್ಮೆ ಎಂಎಲ್‌ಸಿ ರಮೇಶ್ ಗೌಡ ಕರೆ ಮಾಡಿ ಕುಮಾರಸ್ವಾಮಿ ಹತ್ರ ಮಾತನಾಡಲು ಮೊಬೈಲ್ ನೀಡಿದ್ದರು. ಚುನಾವಣೆಗೆ 50 ಕೋಟಿ ರು.ಕೊಡಿ ಎಂದು ಕೇಳಿದರು. ನನಗೆ ಸದ್ಯಕ್ಕೆ ಆಗಲ್ಲ, ಹಣಕಾಸಿನ ಮುಗ್ಗಟ್ಟಿದೆ ಎಂದಿದ್ದೆ. ಆಗ ಕುಮಾರಸ್ವಾಮಿ ನನಗೆ ಬೆದರಿಕೆ ಹಾಕಿದರು. ಅಲ್ಲದೆ ಹಣ ನೀಡದಿದ್ದರೆ ನನ್ನ ಮೇಲಿರುವ ಎಲ್ಲ ಕೇಸ್ ರೀ ಓಪನ್ ಮಾಡಿಸುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.
ಐವತ್ತು ಕೋಟಿ ವಿಷಯ ನನಗೆ ಮತ್ತು ಕುಮಾರಸ್ವಾಮಿ, ರಮೇಶ್ ಗೌಡಗೆ ಸಂಬಂಧಪಟ್ಟ ವಿಚಾರ. ಇದರಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಭಾಗಿಯಾಗಿದ್ದಾರೆ. ಅವರಿಗೆ ಈ ವಿಚಾರ ಬೇಡವಾಗಿತ್ತು. ಶ್ರೀಧರ್ ಅನ್ನುವ ವ್ಯಕ್ತಿ 15 ಕೋಟಿಗೆ ಪಿಎಸಿಎಲ್ ಜಾಗ ಮಾರಾಟ ಮಾಡಿದ್ದಾರೆ. ನಕಲಿ ಚೆಕ್‌ಗಳನ್ನು ಕೊಟ್ಟು ಮಾರಾಟ ಮಾಡಿದ್ದಾರೆ. ಈ ಹಣ ನೇರ ಕುಮಾರಸ್ವಾಮಿಗೆ ಹೋಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಏನಿದು ಜಟಾಪಟಿ?: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿಪಿ ಚಂದ್ರಶೇಖರ್ ಒಬ್ಬಬ್ಯಾಕ್‌ಮೇಲರ್, ಕ್ರಿಮಿನಲ್ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ್ದ ಅಧಿಕಾರಿ ಚಂದ್ರಶೇಖರ್, ಹಂದಿ ಜೊತೆ ಗುದ್ದಾಡ ಬಾರದು ಎಂದು ಬರ್ನಾಡ್ ಶಾ ಅವರ ಹೇಳಿಕೆ ಉಲ್ಲೇಖಿಸಿದ್ದರು.
ಇದಾದ ನಂತರ ಕೀಳುಮಟ್ಟದ ಭಾಷೆ ಬಳಸಿದ ಐಪಿಎಸ್ ಅಧಿಕಾರಿ ವಿರುದ್ದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದರು. ಇದೇ ವೇಳೆ ದೆಹಲಿಯಲ್ಲಿದ್ದ ಕುಮಾರಸ್ವಾಮಿ, ಈ ಹಿಂದೆ ಸಿದ್ದರಾಮಯ್ಯ ಅವರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಈಗಿರುವ ಅವರ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಐಜಿಪಿ ಮೇಲೆ ಆರೋಪ ಮಾಡುವಾಗ ವಿಜಯ್ ಟಾಟಾ ಹೆಸರನ್ನು ಕುಮಾರಸ್ವಾಮಿ ಹೇಳಿದ್ದರು.