Site icon Harithalekhani

ಮುಡಾ ನಿವೇಶನ ಹಿಂದಿರುಗಿಸಲು CM ಪತ್ನಿ ನಿರ್ಧಾರ: ಆರ್.ಅಶೋಕ ಪ್ರತಿಕ್ರಿಯೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದಿದ್ದು, 14 ನಿವೇಶನಗಳನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಮುಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದಾರೆ. ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ’ ಎಂದಿದ್ದಾರೆ.

‘ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ. ಆದರೆ ‘ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ’ ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.

Exit mobile version