ಗದಗ: ಯಾವ ದೇಶದಲ್ಲಿ ಕೌಶಲ್ಯ ಇರುವ ಯುವಕರಿದ್ದಾರೆ ಆ ದೇಶಕ್ಕೆ ಬಡತನ ಇಲ್ಲ. ಭಾರತ ದೇಶದಲ್ಲಿ ಕೌಶಲ್ಯದ ಕೊರತೆ ಇದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿರುವ ಕೌಶಲ್ಯ ಅಭಿವೃದ್ಧಿ ಇಲಾಖೆ ತೆರೆದು ತರಬೇತಿ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಗದಗ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಎಸ್.ಆರ್.ಬೊಮ್ಮಾಯಿ ಟ್ರಸ್ ಹಾಗೂ ಎಸ್.ವಿ. ಸಂಕನೂರು ಅಭಿಮಾನಿ ಬಳಗದ ಸಂಯುಕ್ತಾಶಯದಲ್ಲಿ ಏರ್ಪಡಿಸಿದ್ದ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ನನಗೆ ಕೌಶಲ್ಯ ಅಭಿವೃದ್ಧಿ, ಕಾರ್ಮಿಕ ಹಾಗೂ ಟೆಕ್‌ಟೈಲ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಇಲಾಖೆಗಳ ಜವಾಬ್ದಾರಿಯನ್ನು ಪಧಾನಿ ನೀಡಿದ್ದಾರೆ. ಪ್ರಧಾನ ಮಂತ್ರಿಯ ಕನಸು ಕೌಶಲ್ಯ ಭರಿತ ಭಾರತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ವರದಿಯನ್ನು ನೀಡಲು ನಾನು ಶ್ರಮ ವಹಿಸುತ್ತೇನೆ ಎಂದರು.
ಇಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಬಂದಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದ ನಡುವೆ ಅಂತರ ಇದೆ. ಸಂಸ್ಥೆಗಳು ಬಯಸುವ ಉದ್ಯೋಗಕ್ಕೂ ನಾವು ಕಲಿಯುವುದಕ್ಕೂ ವ್ಯತ್ಯಾಸ ಇದೆ. ಅದನ್ನು ಸರಿಪಡಿಸಲು ಪದವಿ ಪಡೆಯುವ ಮೊದಲೇ ಕೌಶಲ್ಯ ತರಬೇತಿ ಪಡೆಯಬೇಕು. ತಾಂತ್ರಿಕ ತರಬೇತಿ, ಕೌಶಲ್ಯ ತರಬೇತಿ ಪಡೆಯಬೇಕು. ಇಲ್ಲಿ ಖಾಸಗಿ ಸಂಸ್ಥೆಗಳು ನೀಡುವ ತರಬೇತಿ ಅಂತಾರಾಷ್ಟ್ರೀಯ ಕಂಪನಿಗಳ ಎದುರು ಏನೂ ನಡೆಯುವುದಿಲ್ಲ ಎಂದು ಹೇಳಿದರು.
ಮಹಾನಗರಗಳಲ್ಲಿ ಜೀವನ ಮಾಡಬೇಕೆಂದರೆ ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವ ಅನಿವಾರ್ಯತೆ ಇದೆ. ಕೇವಲ ದುಡ್ಡಿಗಾಗಿ ಅಲ್ಲ. ದುಡ್ಡಿದ್ದರೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅಲ್ಲದೇ ಸ್ವಾಭಿಮಾನ ಹೆಚ್ಚಳವಾಗುತ್ತದೆ. ಉದ್ಯೋಗ ಒಂದು ಘನತೆಯನ್ನು ತಂದುಕೊಡುತ್ತದೆ. ಮೊದಲು ಭಾರತದ ಜನಸಂಖ್ಯೆಯ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದರು. ಜನಸಂಖ್ಯೆ ನಿಯಂತಿಸಬೇಕು ಎಂದು ಹೇಳುತ್ತಿದ್ದರು. ನಮ್ಮ ಪ್ರಧಾನಿಗಳು ಜನಸಂಖ್ಯೆಯಿಂದಲೇ ನಮ್ಮ ದೇಶದ ಆರ್ಥಿಕತೆ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು. ಸುಮಾರು 40 ರಷ್ಟು ಜನಸಂಖ್ಯೆ ಯುವಕರಿದ್ದಾರೆ. ಡೆಮಾಗಾಫಿಕ್ ಡಿವೆಂಡೆಂಡ್ ಅಂತ ಕರೆದರು ಎಂದು ಹೇಳಿದರು.
ಶಿಕ್ಷಣ ವ್ಯವಸ್ಥೆ ಬದಲಾಗಬೇಕು
ಈಗೆಲ್ಲ ಇಂಗ್ಲಿಷ್ ಕೇಳುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಭೂಗೋಳದಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಆದರೆ, ಗಣಿತ ವಿಷಯ ಬಂದಾಗ ಮೂವತ್ತೈದು ಅಂಕ ಪಡೆದು ಬರುತ್ತಾರೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವೈಜ್ಞಾನಿಕ ಜ್ಞಾನ ಬರುವಂತಹ ಶಿಕ್ಷಣ ನೀಡಬೇಕು. ಲರ್ನ್ ಅಂಡ್ ಅರ್ನ್ ಅಂತ ವ್ಯವಸ್ಥೆ “ಇದೆ. ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವೇ ಸಂಬಳ ನೀಡಲಿದೆ. ಹೆಚ್ಚಿನ ಯುವಕರು ಅದರ ಲಾಭ ಪಡೆದುಕೊಳ್ಳಬೇಕು ಎಂದರು.
ಗದಗಿಗೆ ಹೆಚ್ಚಿನ ಭವಿಷ್ಯವಿದೆ. ಔದ್ಯೋಗಿಕರಣ ಆಗಲಿದೆ. ಇಲ್ಲಿಯೇ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಇಲ್ಲಿನ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು. ನನ್ನ ಕನಸು ಯಾರು ಪದವಿ ಪಡೆದಿದ್ದಾರೆ. ತಾಂತ್ರಿಕ ತರಬೇತಿ ಪಡೆದಿದ್ದಾರೆ. ಅವರು ನಿರುದ್ಯೋಗಿಗಳಾಗಿರಬಾರದು. ಎಲ್ಲಿ ಹೋದರೂ ಉದ್ಯೋಗ ಸಿಗುವಂತಾಗಬೇಕು. ಒಂದು ಉದ್ಯೋಗ ಪಡೆಯಬೇಕು ಇಲ್ಲದಿದ್ದರೆ ಉದ್ಯೋಗ ನೀಡುವಂತಾಗಬೇಕು ಆಗ ಈ ದೇಶ ಉದ್ದಾರವಾಗಲಿದೆ ಎಂದರು.
ನಾವು ಕೇವಲ ನಾಲ್ಕಾರು ಶ್ರೀಮಂತರು ಮಾತ್ರ ದೇಶ ಕಟ್ಟುತ್ತಾರೆ ಎಂದು ಕೊಂಡಿದ್ದೇವೆ. ಎಲ್ಲಾ ಸುಳ್ಳು, ಬಾಟಮ್ ಆಫ್ ದಿ ಪಿರಾಮಿಡ್ ಪಿರಾಮಿಡ್ ಮೇಲೆ ಇರುವವರು ಬಹಳ ಕಡಿಮೆ, ದೇಶದಲ್ಲಿ 2014 ರಲ್ಲಿ 42 ಸಾವಿರ ಕೊರೋಡ್ ಪತಿಗಳು ಒಂದು ಕೋಟಿಗಿಂತ ಹೆಚ್ಚು ಆದಾಯ ಪಡೆಯುತ್ತಿದ್ದರು. ಈಗ ಮೂರು ಲಕ್ಷಕ್ಕೂ ಹೆಚ್ಚು ಜನರು ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ಕಠಿಣ ಪರಿಶ್ರಮ, ಪ್ರಾಮಾಣಿಕ ಪಯತ್ನ, ದೃಢ ಸಂಕಲ್ಪ, ಸಾಧನೆ ಮಾಡುವ ಛಲ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಯುವಕರು ಮನಸು ಮಾಡಿ ಎತ್ತರಕ್ಕೆ ಹಾರಬೇಕು. ಇಡೀ ಭೂಮಂಡಲ ನಿಮ್ಮದಿದೆ. ಆಕಾಶ ನಿಮ್ಮದಿದೆ. ನಿವೂ ಒಳ್ಳೆಯ ಹೆಸರೂ ಪಡೆಯಿರಿ, ದೇಶಕ್ಕೂ ಒಳ್ಳೆಯ ಹೆಸರು ತನ್ನಿರಿ ಎಂದು ಹೇಳಿದರು.
ಸಂಸ್ಥೆ ಎಂದರೆ ಹೊಸ ಸಂಸ್ಥೆ ಕಟ್ಟುವುದಲ್ಲ. ನಮ್ಮಲ್ಲಿ ಐಟಿಐ, ಇಂಜನೀಯರಿಂಗ್ ಕಾಲೇಜುಗಳಿವೆ. ಅವುಗಳನ್ನು ಸಬಲೀಕರಣ ಮಾಡಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಹೊರಗೆ ಕಳುಹಿಸಿದರೆ ಅವರು ಸದೃಢರಾಗುತ್ತಾರೆ. ಇನ್ನೊಂದು ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದ್ದೆ, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಸುಮಾರು 8 ಲಕ್ಷ ರೂ. ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೆ, ಅದನ್ನು ಈಗಿನ ಸರ್ಕಾರ ನಿಲ್ಲಿಸಿದೆ. ಕರಕುಶಲ ಕರ್ಮಿಗಳಾದ ಕಮ್ಮಾರ, ಕುಂಬಾರ, ಬಡಿಗ ಉದ್ಯೋಗ ಮಾಡುವವರಿಗೆ ತರಬೇತಿ ನೀಡಿ ಸಾಲ ನೀಡುವ ಯೋಜನೆ ರೂಪಿಸಿದ್ದೇವು. ಎಸ್ಸಿ ಎಸ್ಟಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲು ತರಬೇತಿ ನೀಡಲು ಯೋಜನೆ ರೂಪಿಸಿದ್ದೇವು. ಕಷ್ಟ ಪಟ್ಟು ದುಡಿಯುತ್ತೇನೆ ಎನ್ನುವವರಿಗೆ ಖಂಡಿತವಾಗಿಯೂ ಕೆಲಸ ಸಿಗುತ್ತದೆ ಎಂದು ಹೇಳಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ಡಿಪ್ಲೋಮಾ ಕಾಲೇಜ್, ವೆಟರನರಿ, ಐಟಿಐ, ಜಿಟಿಟಿಸಿ, ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೇನೆ. ಇದರಿಂದ ಸುಮಾರು 10 ಸಾವಿರ ಹೆಣ್ಣು ಮಕ್ಕಳಿಗೆ ಕೆಲಸ ಸಿಗುತ್ತಿದೆ. ಒಂದು ಸಾವಿರ ಹೆಣ್ಣು ಮಕ್ಕಳಿಗೆ ನಾನೇ ಉದ್ಯೋಗ ನೀಡಿದ್ದೇನೆ. ಸವಣೂರು ತಾಲೂಕಿಗೆ ಎನ್‌ಟಿಟಿಎಫ್ ತಂದಿದ್ದೇನೆ. ಇಲ್ಲಿ ಕೇವಲ 10 ರಿಂದ 12 ವಾರ ತರಬೇತಿ ಪಡೆದರೆ ಸಾಕು. ಅವರಿಗೆ ಸುಮಾರು 25 ಸಾವಿರ ರೂ. ಸಂಬಳ ದೊರೆಯುತ್ತದೆ. ಆದರೆ, ಯುವಕರು ಆಸಕ್ತಿಯಿಂದ ಬರುತ್ತಿಲ್ಲ ಎಂದರು
ಸಮಾಜದಲ್ಲಿ ಶಿಕ್ಷಣ, ಉದ್ಯೋಗ ನೀಡುವ ಮೂಲಕ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಯುವಕರಿಗೆ ದಾರಿದೀಪವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಾರ್ಯ ಮಹಾನ್ ಕಾರ್ಯ. ಸಂಕನೂರು ಅವರ ದೂರದೃಷ್ಟಿಯಿಂದ ಗದಗನಲ್ಲಿ ನಿರಂತರವಾಗಿ ಕೆಲಸ ನಡೆಯುತ್ತಿವೆ. ಅವರು ಬದ್ದತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಜರಿದ್ದರು.