ಬೆಂಗಳೂರು: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಭ್ರಷ್ಟ ಅಧಿಕಾರಿ, ಬ್ಲಾಕ್ ಮೇಲರ್ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ತಿರುಗೇಟು ಎಂಬಂತೆ ಎಡಿಜಿಪಿ ಚಂದ್ರಶೇಖರ್ ಅವರೂ ಪತ್ರದ ಮೂಲಕ ಹೆಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಪತ್ರದಲ್ಲಿ ಬರ್ನಾಡ್ ಶಾ ಅವರ ಸಾಲನ್ನು ಉಲ್ಲೇಖಿಸಿ ಹಂದಿ ಜೊತೆ ಗುದ್ದಾಟ ಬೇಡ ಎಂಬುವುದನ್ನು ಉಲ್ಲೇಖಿಸಿದ್ದರು.
ಇದನ್ನೂ ಓದಿ: ADGP ಪತ್ರ, ದಳಪತಿಗಳು ತತ್ತರ.. ನಿಖಿಲ್ ಕುಮಾರಸ್ವಾಮಿ ಕಿಡಿ
ಇದರ ಮುಂದುವರಿದ ಭಾಗವಾಗಿ ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೊಳಕು ಭಾಷೆಯನ್ನು ಬಳಸಿ ದುರ್ವರ್ತನೆ ತೋರಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಜಾತ್ಯತೀತ ಜನತಾದಳ ಪಕ್ಷವು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದೆ.
ಸೋಮವಾರ ಬೆಳಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ನೇತೃತ್ವದ ಶಾಸಕರ ನಿಯೋಗ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿ ಕೂಡಲೇ ಕಳಂಕಿತ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸುವಂತೆ ಜೆಡಿಎಸ್ ಶಾಸಕರು ಒತ್ತಾಯಿಸಿದರು.
ಇದೇ ವೇಳೆಯಲ್ಲಿ ಸುರೇಶ್ ಬಾಬು ಅವರು ಚಂದ್ರಶೇಖರ್ ಅವರ ವಿರುದ್ಧ ಕೇಳಿ ಬಂದಿರುವ ಅಧಿಕಾರ ದುರುಪಯೋಗ, ಸುಲಿಗೆ, ಬ್ಲಾಕ್ ಮೇಲ್ ಇನ್ನಿತರೆ ಆರೋಪಗಳ ಬಗ್ಗೆ ಮಹತ್ವದ ದಾಖಲೆಗಳನ್ನು ಸಲ್ಲಿಸಿದರು.
ಹಿಮಾಚಲ ಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ಚಂದ್ರಶೇಖರ್ ಅವರು ಸಬೂಬುಗಳನ್ನು ಹೇಳಿಕೊಂಡು ಕರ್ನಾಟಕದಲ್ಲೇ ಹಲವು ವರ್ಷಗಳಿಂದ ಬಿಡಾರ ಹೂಡಿ ಮಾಡಬಾರದ ಭ್ರಷ್ಟಾಚಾರ ಕಾರ್ಯಗಳನ್ನು ಮಾಡಿದ್ದಾರೆ ಎಂದು ನಿಯೋಗ ಆರೋಪಿಸಿದೆ.
ಭೂ ಮಾಫಿಯಾ ಜತೆ ಶಾಮೀಲಾಗಿರುವ ಚಂದ್ರಶೇಖರ್, ಬೆಂಗಳೂರಿನಲ್ಲಿ ಸಮಾಜ ವಿರೋಧಿ ಶಕ್ತಿಗಳ ಜತೆ ಶಾಮೀಲಾಗಿ ಕೈ ಜೋಡಿಸಿ ಅನೇಕ ಕಡೆ ಭೂ ಮಾಲೀಕರನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದಾರೆ, ಅಲ್ಲದೆ, ಕೆಲವು ಪ್ರಕರಣಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣಗಾರರಿಗೆ ಕಿರುಕುಳ ನೀಡಿದ್ದಾರೆ. ತಮ್ಮ ಕೆಳಹಂತದ ಅಧಿಕಾರಿಗಳನ್ನು ಹಣ ತಂದು ಕೊಡುವಂತೆ ಪೀಡಿಸಿದ್ದು, ಈ ಸಂಬಂಧ ದೂರುಗಳೂ ದಾಖಲಾಗಿವೆ, ಆದರೂ ಇದುವರೆಗೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ನಿಯೋಗ ಆರೋಪ ಮಾಡಿದೆ.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸುರೇಶ್ ಬಾಬು ಅವರು; ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದಾಖಲೆಗಳನ್ನು ಇಟ್ಟುಕೊಂಡೇ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದಾರೆಯೇ ಹೊರತು, ವೈಯಕ್ತಿಕ ಟೀಕೆ ಮಾಡಿಲ್ಲ, ಆದರೆ, ಚಂದ್ರಶೇಖರ್ ಎಲ್ಲ ಮೀರಿ ತಮ್ಮ ಸಹೋದ್ಯೋಗಿಗಳಿಗೆ ಪತ್ರ ಬರೆಯುವ ಮೂಲಕ ಉನ್ನತ ಹುದ್ದೆಯಲ್ಲಿರುವವರ ಅವಹೇಳನ ಮಾಡಿದ್ದಾರೆ ಎಂದು ದೂರಿದರು.
ಚಂದ್ರಶೇಖರ್ ಒಬ್ಬ ಕಳಂಕಿತ ಅಧಿಕಾರಿ. ಅವರು ನಾಗರಿಕ ಸೇವೆಗೆ ಕಳಂಕಕಾರಿ. ಇಂಥ ವ್ಯಕ್ತಿಯನ್ನು ನಾಗರಿಕ ಸೇವೆಯಲ್ಲಿ ಮುಂದುವರಿಸುವುದು ಸರಿಯಲ್ಲ. ಕೂಡಲೇ ಆ ವ್ಯಕ್ತಿಯನ್ನು ನಾಗರಿಕ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಅವರ ವಿರುದ್ಧ ಸ್ವತಂತ್ರ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದರು.
ನಿಯೋಗದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಎ.ಮಂಜು, ವೆಂಕಟ ಶಿವಾರೆಡ್ಡಿ, ಬಿ.ಎಂ.ಫಾರುಕ್, ಕೆ.ಎನ್.ತಿಪ್ಪೇಸ್ವಾಮಿ, ಕರೆಮ್ಮ ನಾಯಕ್, ಸಿ.ಎನ್.ಮಂಜೇಗೌಡ, ರವಿ, ಮಂಜುನಾಥ್ ಸೇರಿದಂತೆ ಎಲ್ಲ ಶಾಸಕರು ಇದ್ದರು.