ಬೆಂಗಳೂರು; ನಿನ್ನೆ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ, ಸಂಜೆ ಎಡಿಜಿಪಿ ಎಂ.ಚಂದ್ರಶೇಖರ್ ರಾವ್ ಅವರು ಸಿಬ್ಬಂದಿಗಳಿಗೆ ಬರೆದಿರುವ ಪತ್ರ ದಳಪತಿಗಳನ್ನು ಮುಜುಗರಕ್ಕೀಡುಮಾಡಿದ್ದು, ತನಿಖೆಯ ವೇಳೆ ಕೇಂದ್ರ ಸಚಿವರಿಗೆ ಇದು ಬೇಕಿತ್ತಾ.? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಎಡಿಜಿಪಿ ಎಂ.ಚಂದ್ರಶೇಖರ್ ರಾವ್ ಬರೆದಿರುವ ಪತ್ರದ ಹಿಂದೆ ಸಾಕಷ್ಟು ಕೈವಾಡವಿದೆ. ಅವರ ಬೆನ್ನಿಂದೆ ನಿಂತು ಈ ರೀತಿ ಪತ್ರ ಬರೆಯುವುದಕ್ಕೆ ಪ್ರೇರಣೆಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಅಧಿಕಾರಿಗಳು ಸರ್ಕಾರದ ಕೈಗೊಂಬೆ: ರಾಜ್ಯ ಸರ್ಕಾರ ಇವತ್ತು ಯಾವ ರೀತಿ ನಡೆಯುತ್ತಿದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಭವಿಷ್ಯ ಹಿಂದಿನ ಸಾಕಷ್ಟು ಸರ್ಕಾರಗಳು ರಾಜ್ಯದಲ್ಲಿ ಆಡಳಿತ ಮಾಡಿದ್ದವು, ಆದರೆ ಈ ರೀತಿಯಾಗಿ ಅಧಿಕಾರಿಗಳನ್ನ ದುರುಪಯೋಗ ಪಡೆಸಿಕೊಂಡು ಈ ರೀತಿ ಆಡಳಿತ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಗಾಗಿ ಇದ್ಯಾವುದಕ್ಕೂ ಭಯಪಡುವ ಅಗತ್ಯ ಇಲ್ಲ. ಅವರ ಈ ಇಂತಹ ನೂರು ಪತ್ರಗಳನ್ನ ಬರೆಯಲಿ, ಅಧಿಕಾರ ಶಾಶ್ವತ ಅಲ್ಲ, ಇವರು ತೋರಿಸಿಕೊಟ್ಟಿರುವ ದಾರಿ ದ್ವೇಷದ ರಾಜಕಾರಣ ಮುಂದುವರೆಸಬೇಕಾ ? ಅಧಿಕಾರದಲ್ಲಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣ ಅವರು ಈ ರೀತಿ ಮಾಡಿದರಾ.? ಎಂದು ಕಿಡಿಕಾರಿದರು.
ನಿನ್ನೆ ಬರೆದಿರುವ ಪತ್ರದಲ್ಲಿ ಆ ಪತ್ರದಲ್ಲಿ ಏನೇನು ಉಲ್ಲೇಖಿಸಿದ್ದರೆ ಇವೆಲ್ಲವನ್ನು ನೋಡಿದಾಗ ಅದರ ಹಿಂದೆ ಯಾವ್ಯಾವ ವ್ಯಕ್ತಿಗಳು ಅವರಿಗೆ ಪ್ರೇರೆಪಣೆ ಕೊಟ್ಟಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಎಡಿಜಿಪಿ ಪತ್ರದಲ್ಲೇನಿದೆ; ಎಸ್‌ಐಟಿ ತನಿಖೆಯ ಆರೋಪಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಲೋಕಾಯುಕ್ತ ವಿಶೇಷ ತನಿಖಾ ದಳದ ADGP ಎಂ.ಚಂದ್ರಶೇಖರ್ ಅವರು ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರ ಆರೋಪಗಳಿಗೆ ಬೆದರಿಕೆಗಳಿಗೆ ಬಗ್ಗಲ್ಲ. ಅವರು ಎಷ್ಟೇ ಶಕ್ತಿ ಶಾಲಿ, ಉನ್ನತ ಸ್ಥಾನದಲ್ಲಿದ್ದರೂ ಜಾಮೀನಿನ ಮೇಲಿರುವ ಆರೋಪಿ ಅಷ್ಟೇ ಎಂದಿದ್ದಾರೆ..
ನನ್ನ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು, ಅವರ ಕರ್ತವ್ಯವನ್ನು ಕುಗ್ಗಿಸುವ ಉದ್ದೇಶವಾಗಿದೆ ಎಂದು ಚಂದ್ರಶೇಖರ್ ಗುಡುಗಿದ್ದಾರೆ.
ಅಲ್ಲದೆ “ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನೇ ಬಯಸುತ್ತದೆ” ಎಂಬ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ದ ಇಂಗ್ಲಿಷ್ ಸಾಲನ್ನೂ ಉಲ್ಲೇಖಿಸುವ ಮೂಲಕ ಕುಮಾರಸ್ವಾಮಿಗೆ ಖಾರವಾಗಿ ಟಾಂಗ್ ನೀಡಿದ್ದಾರೆ. ಮುಂದುವರಿದು ಅಧಿಕಾರಿಗಳು ತನಿಖೆಯ ಭರವಸೆ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಆರೋಪ: ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಇಂತಹ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ತನಿಖೆ ಮಾಡಿಸುತ್ತಿದೆ.
ಈ ವ್ಯಕ್ತಿ ಸರಣಿ ಅಪರಾಧಗಳನ್ನು ಮಾಡಿದ್ದಾನೆ ಎಂದು ಕುಮಾರಸ್ವಾಮಿ ಅವರು ಲೋಕಾಯುಕ್ತ ವಿಶೇಷ ತನಿಖಾ ದಳದ (SIT) ಐಜಿಪಿ ಎಂ.ಚಂದ್ರಶೇಖರ್ ಅವರನ್ನು ಗುರಿಯಾಗಿಸಿ ಇಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.