ಮುಂಬಯಿ: “ನೈಜ ರಾಜಕಾರಣ ಎಂದರೆ ಸಮಾಜ ಸೇವೆ, ರಾಷ್ಟ್ರನಿರ್ಮಾಣ ಮತ್ತು ಅಭಿವೃದ್ಧಿ, ಆದರೆ, ಪ್ರಸ್ತುತ ರಾಜಕಾರಣದ ವ್ಯಾಖ್ಯಾನವು ಪೂರ್ಣವಾಗಿ ಬದಲಾಗಿದ್ದು, ಕೇವಲ ಅಧಿಕಾರದ ರಾಜಕಾರಣ ಎಲ್ಲೆಡೆ ತಾಂಡವವಾಡುತ್ತಿದೆ,” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ರಾಜ್ಯಪಾಲ ಹರಿಭಾವು ಬಗಾಡೆ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಗಡ್ಕರಿ, ಆರ್‌ಎಸ್ಎಸ್ ಕಾರ್ಯಕರ್ತರಾಗಿದ್ದ ವೇಳೆ ನಾವು ಬಹಳ ಕಷ್ಟಗಳನ್ನು ಎದುರಿಸಿದೆವು. ನಮ್ಮನ್ನು ಸರಿಯಾಗಿ ಗುರುತಿಸಲಾಗುತ್ತಿರಲಿಲ್ಲ. ಜತೆಗೆ ಗೌರವ ಸಿಗುತ್ತಿರಲಿಲ್ಲ, ಹಾಗಿದ್ದೂ ಕೂಡ ಹರಿಭಾವಯ ಬಗಾಡೆ ಅವರು ಬದ್ಧತೆಯಿಂದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದರು.
ವಿದರ್ಭ ಪ್ರದೇಶದಲ್ಲಿ 20 ವರ್ಷಗಳ ವರೆಗೆ ಪಕ್ಷದ ಕಾರ್ಯಕರ್ತನಾಗಿ ತಿರುಗಾಡಿದ್ದೇನೆ. ನಮ್ಮ ರ್ಯಾಲಿಗಳ ಮೇಲೆ ಕೆಲವರು ಕಲ್ಲು ತೂರುತ್ತಿದ್ದರು. ತುರ್ತು ಪರಿಸ್ಥಿತಿ ವೇಳೆ ನಮ್ಮ ಪ್ರಚಾರದ ಆಟೋಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು,’ ಎಂದು ತಾವು ಎದುರಿಸಿದ ಸವಾಲುಗಳನ್ನು ಸ್ಥರಿಸಿದರು.
“ಒಬ್ಬ ಉತ್ತಮ ಕಾರ್ಯಕರ್ತ ಯಾವಾಗಲೂ ಕೂಡ ಪಕ್ಷದಿಂದ ಏನನ್ನೂ ಕೂಡ ಬಯಸಲ್ಲ. ಆದರೂ ಆತ ಸಭ್ಯ ನಡವಳಿಕೆಯನ್ನು ಉಳಿಸಿಕೊಂಡಿರುತ್ತಾನೆ,” ಎಂದು ಗಡ್ಕರಿ ಅವರು ಕಿವಿಮಾತು ಹೇಳಿದರು.