ಮೈಸೂರು: ಸಾಹಿತಿ ಹಂ.ಪ. ನಾಗರಾಜಯ್ಯ ನವರಿಂದ ಈ ಬಾರಿಯ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದು, ದಸರಾ ಉತ್ಸವವನ್ನು ಜನರ ಉತ್ಸವದಂತೆ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ನಂತರ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.
ಅಕ್ಟೋಬರ್, 3 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ ಹಂ.ಪ. ನಾಗರಾಜಯ್ಯ ನವರು ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ದಸರಾ ಉದ್ಘಾಟನೆ, ವಸ್ತುಪ್ರದರ್ಶನ, ದಸರಾ ಕ್ರೀಡಾ ಉತ್ಸವ ಉದ್ಘಾಟನೆ , ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ, ಸಿನಿಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ದಸರಾ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸರ್ವ ಸಿದ್ದತೆಗಳನ್ನು ಮಾಡುತ್ತಿದ್ದಾರೆ ಎಂದರು.
ಕಾನೂನು ಲೋಪ ನಡೆಯದಂತೆ ಪೊಲೀಸರಿಗೆ ಸೂಚನೆ; ದಸರಾ ಮಹೋತ್ಸವದಲ್ಲಿ ಉತ್ತಮ ರಸ್ತೆ, ವಿದ್ಯುತ್ ಅಲಂಕಾರ ಸೇರಿದಂತೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.
ಇತ್ತೀಚೆಗೆ ನಾಗಮಂಗಲದ ಘಟನೆ, ಪೊಲೀಸರ ಕರ್ತವ್ಯ ಲೋಪದಿಂದ ನಡೆದಿದ್ದು, ಅನಾಹುತ ನಡೆಯುವ ಸಂಭವವಿರುತ್ತಿರಲಿಲ್ಲ. ಆ ರೀತಿಯ ಲೋಪಗಳು ದಸರಾ ಸಂದರ್ಭದಲ್ಲಿ ನಡೆಯಬಾರದೆಂದು ಸೂಚಿಸಲಾಗಿದೆ ಎಂದರು.
ಜಾಮೀನಿನ ಮೇಲೆ ಹೊರಗಿರುವ ಕುಮಾರಸ್ವಾಮಿ ರಾಜಿನಾಮೆ ನೀಡಲಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,17 ಎ ಪ್ರಕಾರ ಎಫ್ ಐ ಆರ್ ದಾಖಲು ಮಾಡಿ, ತನಿಖೆ ಮಾಡುತ್ತಾರೆ.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಸಂಬಂಧಿಸಿದಂತೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ ಐ ಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ಕೊಡುತ್ತಾರೆಯೇ ? ಎಂದು ಪ್ರಶ್ನಿಸಿದರು.
ಬಿಜೆಪಿಯವರು, ಸಿಎಂ ರಾಜಿನಾಮೆ ಕೊಡುತ್ತಾರೆ ಎನ್ನುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಕುಮಾರಸ್ವಾಮಿಯವರು ರಾಜಿನಾಮೆ ನೀಡಲಿ. ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದರು.
ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ ; ಬಿಜೆಪಿ ಪಕ್ಷದಲ್ಲಿಯೇ ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪ್ರದಾನಿ ಮೋದಿಯವರು ಹರಿಯಾಣದ ಪ್ರಚಾರ ಭಾಷಣದಲ್ಲಿ ರಾಜ್ಯದ ಮುಡಾ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಯಿಸುತ್ತಾ, ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಮೋದಿಯವರು ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದೂ ಇಲ್ಲ , ಅಲ್ಲಿಗೆ ಭೇಟಿಯೂ ನೀಡಲಿಲ್ಲವೇಕೆ? ಎಂದು ಪ್ರಶ್ನಿಸಿದರು.
ಸುಳ್ಳು ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ; ಕುಮಾರಸ್ವಾಮಿ ಸುದ್ದಿಗೋಷ್ಟಿಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರ ಎಲ್ಲ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವುದು ಅವಶ್ಯಕತೆಯಿಲ್ಲ ಎಂದರು.
ಪೊನ್ನಣ್ಣ ನವರು ನನ್ನ ಕಾನೂನು ಸಲಹೆಗಾರರಾಗಿರುವುದರಿಂದ , ಪ್ರತಿದಿನ ಅವರಿಂದ ಕಾನೂನಿನ ಚರ್ಚೆ ನಡೆಸುತ್ತೇನೆ ಎಂದರು.
ಉತ್ತಮ ಮಳೆಯಿಂದಾಗಿ ತಮಿಳು ನಾಡಿಗೆ ಹೆಚ್ಚಿನ ನೀರು ಹರಿಸಲಾಗಿದೆ: ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ತಮಿಳುನಾಡಿಗೆ ಈಗಾಗಲೇ 202 ಟಿ.ಎಂ.ಸಿ ನೀರು ಬಿಡಲಾಗಿದೆ. ಕರ್ನಾಟಕ ನಿಯಮಾನುಸಾರ ಬಿಡುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ತಮಿಳುನಾಡಿಗೆ ಹರಿಸಿದೆ ಎಂದರು.