ಅಮರಾವತಿ: ರಾಜ್ಯದಲ್ಲಿ ರಾಕ್ಷಸರ ಸರಕಾರವಿದೆ. ದೇಗುಲ ಭೇಟಿಗೂ ತಡೆಯೊಡ್ಡುವ ರಾಜ ಕೀಯ ಪಕ್ಷವನ್ನು ಎಂದೂ ನೋಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ, ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಪಕ್ಷ ಮತ್ತು ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಿಗದಿತ ತಿರುಪತಿ ಭೇಟಿಯನ್ನು ರದ್ದುಗೊಳಿಸಿದ ಜಗನ್ ಗುರುವಾರ ಸುದ್ದಿಗೋಷ್ಠಿ ನಡೆಸಿ, ಸಿಎಂ ಚಂದ್ರಬಾಬು ನಾಯ್ಡು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಿರುಪತಿ ಲಡ್ಡು ಪ್ರಸಾದವನ್ನು ಹಿಂದಿನ ಸರಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿದ ತುಪ್ಪ ಬಳಸಿ ತಯಾರಿಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿರುವುದರ ಪ್ರಾಯಶ್ಚಿತವಾಗಿ ಸೆ.28ರಂದು ಮಾಜಿ ಸಿಎಂ ಜಗನ್ ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಗೊಳ್ಳುವಂತೆ ಕರೆ ನೀಡಿದ್ದರು.
ಚಂದ್ರಬಾಬು ನಾಯ್ಡು ಸರಕಾರ ಪೊಲೀಸರ ಮೂಲಕ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿರುಪತಿ ಭೇಟಿ ಕಾರ್ಯಕ್ರ ಮದಲ್ಲಿ ಭಾಗಿಯಾಗದಂತೆ ನೋಟಿಸ್ ನೀಡಿದೆ. ತಿರುಪತಿ ದಾರಿಯ ಹಲವೆಡೆ ಭಾರಿ ಸಂಖ್ಯೆಯ ಪೊಲೀಸ್ ನಿಯೋಜನೆಗೊಳಿಸಿದ್ದಾರೆ.
ಹೊರ ರಾಜ್ಯಗಳಿಂದ ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಾರೆ. ರಾಕ್ಷಸರ ಆಡಳಿತದಲ್ಲಿ ದೇಗುಲ ಪ್ರವೇಶಕ್ಕೂ ಅನುಮತಿ ಪಡೆಯಬೇಕಿದೆ ಎಂದು ಜಗನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನದು ಮಾನವೀಯ ಧರ್ಮ: ಮನೆಯಲ್ಲಿ ಬೈಬಲ್ ಓದುವೆ. ಹಿಂದೂ, ಇಸ್ಲಾಂ, ಸಿಖ್ ಧರ್ಮವನ್ನೂ ಪಾಲಿಸುವೆ. ನನ್ನದು ಮಾನವೀಯತೆಯ ಧರ್ಮ’ ಎಂದು ಜಗನ್ ಹೇಳಿಕೊಂಡಿದ್ದಾರೆ.
ನಾಯ್ಡು ಆರೋಪದಿಂದ ತಿರುಪತಿ ಲಡ್ಡು ಪ್ರಸಾದದ ಖ್ಯಾತಿ ಕುಸಿಯುತ್ತಿದೆ ಎಂದು ಟೀಕಿಸಿದ್ದಾರೆ.
ತಿರುಪತಿ ಭೇಟಿ ವೇಳೆ ಜಗನ್ ರೆಡ್ಡಿ ತಮ್ಮ ನಂಬಿಕೆ ಮತ್ತು ಧರ್ಮವನ್ನು ದೇಗುಲದ ಫಾರಂನಲ್ಲಿ ಘೋಷಿಸಿಕೊಳ್ಳಬೇಕು. ಆ ಬಳಿಕವಷ್ಟೇ ಪ್ರವೇಶ ಅವಕಾಶ ಎಂದು ತಿರುಪತಿ ತಿರುಮಲ ದೇಗುಲ ಷರತ್ತು ವಿಧಿಸಿತ್ತು. ಬಿಜೆಪಿ ಮತ್ತು ಟಿಡಿಪಿ ಕೂಡಾ ದನಿಗೂಡಿಸಿದ್ದವು.