ಅಯೋಧ್ಯೆ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆಯಾಗಿರುವುದು ಪ್ರಯೋಗಾಲಯ ವರದಿ ಯಿಂದ ದೃಢಪಟ್ಟ ಬಳಿಕ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಅರ್ಚಕರು, ಪ್ರಸಾದದ ಪಾವಿತ್ರ್ಯ ರಕ್ಷಣೆಗಾಗಿ ಪ್ರಸಾದವನ್ನು ದೇವಾಲಯದಲ್ಲೇ ತಯಾರಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು, ಹೊರಗಿನ ಏಜೆನ್ಸಿಗಳಿಂದ ಪ್ರಸಾದ ತರಿಸುವುದು ಬೇಡ. ದೇವರಿಗೆ ಅರ್ಪ ಣೆಯಾಗುವ ಪ್ರಸಾದ ಅರ್ಚಕರ ನಿಗಾದಲ್ಲೇ, ದೇವಾಲಯದಲ್ಲೇ ತಯಾರಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಳಪೆ ಸಾಮಗ್ರಿ ಬಳಸಿ ಪ್ರಸಾದ ತಯಾರಿಸಿ ಭಾರತದ ಹಿಂದೂ ದೇವಾಲಯಗಳ ಪಾವಿತ್ರ್ಯ ಹಾಳು ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆಯುತ್ತಿದೆ ಎಂದೂ ಸತ್ಯೇಂದ್ರ ದಾಸ್ ಆರೋಪಿಸಿದ್ದಾರೆ.
ಮಥುರಾದಲ್ಲಿಯೂ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸುವ ಪ್ರಸಾದಕ್ಕೆ ಸಿಹಿ ಅಂಗಡಿಗಳಲ್ಲಿ ಮಾರುವ ರೀತಿಯ ಸಿಹಿ ತಿನಿಸುಗಳ ಬದಲು ನಿಸರ್ಗ ಮೂಲದ ಹಣ್ಣುಗಳನ್ನಷ್ಟೇ ಪ್ರಸಾದಕ್ಕೆ ಬಳ ಸಲು ನಿರ್ಧರಿಸಲಾಗಿದೆ ಎಂದು ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೌರಭ್ ಗೌರ್ ತಿಳಿಸಿ ದ್ದಾರೆ.
ರಾಜ್ಯದ ಹಲವು ದೇವಾಲಯಗಳಲ್ಲಿ, ಭಕ್ತರು ದೇಗುಲಕ್ಕೆ ಹೊರಗಿನ ಸಿಹಿ ತಿನಿಸುಗಳನ್ನು ತರುವುದನ್ನೂ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಲಡ್ಡು ಸಮಗ್ರ ತನಿಖೆಗೆ ಎಸ್‌ಐಟಿ; ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದ ತುಪ್ಪ ಬಳಸಿದ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದ್ದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರಕಾರ, ಈ ಸಂಬಂಧ 9 ಸದಸ್ಯರ ವಿಶೇಷ ತನಿಖಾದಳ(ಎಸ್‌ಐಟಿ) ರಚಿಸಿದೆ.
ಗುಂಟೂರು ವಲಯದ ಐಜಿಪಿ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾ ಗಿದೆ. ಲಡ್ಡು ಅಪವಿತ್ರಗೊಳಿಸಿ ಭಕ್ತರ ಮನಸ್ಸಿಗೆ ಘಾಸಿಗೊಳಿಸಿದ ಪ್ರಕರಣದಲ್ಲಿ ಎಸ್‌ಐಟಿ ಸಮಗ್ರ ತನಿಖೆ ನಡೆಸಲಿದೆ. ಅಲ್ಲದೇ, ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿ ಯಲ್ಲಿ ತಿರುಮಲ ತಿರುಪತಿ ದೇಗುಲದಲ್ಲಿ (ಟಿಟಿಡಿ) ನಡೆದಿದೆ ಎನ್ನಲಾದ ಅಕ್ರಮಗಳ ಕುರಿತೂ ಹಿರಿಯ ಪೊಲೀಸ್ ಅಧಿಕಾರಿಗಳ ಇದೇ ತಂಡ ತನಿಖೆ ನಡೆಸಲಿದೆ.
ವಿಶೇಷ ತನಿಖಾ ತಂಡದಲ್ಲಿ ವಿಶಾಖಪಟ್ಟಣ ರೇಂಜ್ ಡಿಐಜಿ ಗೋಪಿನಾಥ್ ಜತ್ತಿ, ಕಡಪಾ ಎಸ್‌ಪಿ ವಿ.ಹರ್ಷವರ್ಧನ್ ರಾಜು, ತಿರುಪತಿ ಹೆಚ್ಚುವರಿ ಎಸ್‌ಪಿ ವೆಂಕಟರಾವ್, ಡಿವೈಎಸ್ ಪಿಗಳಾದ ಜಿ.ಸೀತಾರಾಮ ರಾವ್ ಮತ್ತು ಜೆ.ಶಿವನಾರಾಯಣ ಸ್ವಾಮಿ, ಅನ್ನಮಯ್ಯ ಜಿಲ್ಲೆಯ ವಿಶೇಷ ದಳದ ಇನ್‌ಸ್ಪೆಕ್ಟರ್ ಟಿ.ಸತ್ಯನಾರಾಯಣ, ಕೆ.ಉಮಾಮಹೇಶ್ವರ್ ಮತ್ತು ಎಂ. ಸೂರ್ಯನಾರಾಯಣ ಕಾರ್ಯನಿರ್ವಹಿಸಲಿದ್ದಾರೆ.
ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಹಸುವಿನ ತುಪ್ಪ ಬಳಸುವುದರ ಬದಲು ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ತುಪ್ಪ ಬಳಸಲಾಗಿದೆ ಎಂಬ ಆರೋಪದ ಕುರಿತು ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅದರನ್ವಯ ವಿಸ್ತ್ರತ ತನಿಖೆ ನಡೆಸುವ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ.