ಲಕ್ನೋ; ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಇಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಟೈಗರ್ ರಾಬಿ ಎಂದು ಕರೆಯಲ್ಪಡುವ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿ ಅನಾರೋಗ್ಯದ ಕಾರಣ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರಾಬಿಯ ಬೆನ್ನು ಮತ್ತು ಕೆಳ ಹೊಟ್ಟೆಯ ನೋವು ಹಾಗೂ ಉಸಿರಾಡಲು ಕಷ್ಟಪಡುತ್ತಿದ್ದರು ಎಂದು ತಿಳಿಸಲಾಗಿದೆ. ಅಲ್ಲದೆ ಟೈಗರ್ ರಾಬಿ ಅವರ ಮೇಲೆ ಕೆಲ ಅಭಿಮಾನಿಗಳು ಹಲ್ಲೆ ನಡೆಸಲಾಗಿದೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.
ಆದರೆ ಪೊಲೀಸರು ಹಲ್ಲೆಯ ಆರೋಪವನ್ನು ನಿರಾಕಿಸಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿದಾಗ ರಾಬಿ ಸಿ ಬ್ಲಾಕ್ ಪ್ರವೇಶದ್ವಾರದ ಬಳಿ ಉಸಿರಾಡಲು ಮತ್ತು ಮಾತನಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಮೇಲೆ ಹಲ್ಲೆ ನಡೆಸಲಾಗಿಲ್ಲ. ಬದಲಿಗೆ ಡಿಹೈಡೇಷನ್ ನಿಂದಾಗಿ ಅವರ ಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಬಿ, ದಿನದ ಆಟದ ಪ್ರಾರಂಭದಿಂದಲೂ ಪ್ರೇಕ್ಷಕರು ತನ್ನನ್ನು ನಿಂದಿಸುತ್ತಿದ್ದರು. ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ನಾನು ಬಾಲ್ಕನಿಗೆ ಏರಿದ್ದೆ ಆದರೆ ಆ ಬ್ಲಾಕ್‌ನಲ್ಲಿ ನಿಲ್ಲಬೇಡಿ ಎಂದು ಒಬ್ಬ ಪೋಲೀಸ್ ನನಗೆ ಹೇಳಿದರು.
ನನಗೆ ಭಯವಾಗುತ್ತಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ. ನನಗೆ ಬೆಳಗ್ಗಿನಿಂದಲೂ ಪ್ರೇಕ್ಷಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನಾನು ಈ ಹಿಂದೆ ಸಾಕಷ್ಟು ಬಾಲಿವುಡ್ ಸಿನಿಮಾಗಳನ್ನು ವೀಕ್ಷಿಸಿದ್ದರಿಂದ ಆ ನಿಂದನೆಗಳು ನನಗೆ ಅರ್ಥವಾಗುತ್ತಿತ್ತು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.