ಮಂಗಳೂರು: ಮೊಬೈಲ್ ತೆಗೆದುಕೊಂಡವ ವಾಪಸ್ ನೀಡದಿರುವುದಕ್ಕೆ ಕೋಪಗೊಂಡು ಸ್ನೇಹಿತನ ಕೊಲೆಗೈದ ಆರೋಪಿಯನ್ನು ಮಂಗಳೂರಿನ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ತೋಟಬೆಂಗ್ರೆಯ ನಿವಾಸಿ ಧರ್ಮರಾಜ್ ಸುವರ್ಣ (50) ಬಂಧಿತ ಆರೋಪಿಯಾಗಿದ್ದು, ಸೆಪ್ಟಂಬರ್ 21ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಬಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಯಾನೆ ಮುದುಕಪ್ಪ ಎಂಬವರ ಕೊಲೆ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ದುರುಗಪ್ಪ ವಡ್ಡರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿ ಧರ್ಮರಾಜ್ ಸುವರ್ಣ ಎಂಬಾತನನ್ನು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಆರೋಪಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸವಾಗಿದ್ದನು. ಧರ್ಮರಾಜ್ ಸುವರ್ಣ ಮತ್ತು ಮುತ್ತು ಬಸವರಾಜ ವಡ್ಡರ್ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯವಾಗಿದ್ದರು.
ಇತ್ತೀಚೆಗೆ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲನ್ನು ಮುತ್ತು ಬಸವರಾಜ್ ತೆಗೆದುಕೊಂಡು ವಾಪಸ್ ನೀಡದೆ ಹಾಳು ಮಾಡಿದ್ದ ಎನ್ನಲಾಗಿದೆ.
ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಆರೋಪಿಯು ಮುತ್ತು ಬಸವರಾಜನನ್ನು ಮರದ ದಿನ್ನೆಯಿಂದ ಹೊಡೆದು ಕೊಲೆ ಮಾಡಿದ್ದ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.