ಶಿರಡಿ ಸಾಯಿಬಾಬಾ ಒಮ್ಮೆ ಮಲಗಿದ್ದ ರೈತನನ್ನು ಕರೆದರು. ಬಾಬಾರ ಧ್ವನಿಯಿಂದ ಎಚ್ಚೆತ್ತ ರೈತ ಮನೆಯಾಚೆ ಓಡೋಡಿ ಬಂದ. ಬಂದವನೇ ಕೈಜೋಡಿಸಿದ. ಆಗ ಬಾಬ “ನಿನ್ನ ಹೊಲದ ಪಕ್ಕದಲ್ಲಿ ಬೆಂಕಿ ಹತ್ತಿಕೊಂಡಿದೆ. ಸದ್ಯದಲ್ಲೇ ನಿನ್ನ ಹೊಲಕ್ಕೂ ತಗಲಬಹುದು” ಎಂದು ಎಚ್ಚರಿಸಿದರು.
ಬಾಬಾರ ಮಾತುಗಳಲ್ಲಿ ವಿಶ್ವಾಸವಿಟ್ಟಿದ್ದ ರೈತ ಕೂಡಲೇ ತನ್ನ ಹೊಲದತ್ತ ಓಡಿದ. ನೋಡಿದರೆ ಅಲ್ಲಿ ಬೆಂಕಿಯೇ ಇಲ್ಲ. ಸುತ್ತಮುತ್ತ ನೋಡುತ್ತಾನೆ ಎಲ್ಲಿಯೂ ಬೆಂಕಿಯ ಕೆನ್ನಾಲಗೆ ಕಾಣಿಸಲೇ ಇಲ್ಲ. ಹೊಲ ಇದ್ದಂತೆಯೇ ಇದೆ. ಬಾಬಾ ಯಾಕೆ ಹಾಗೆ ಹೇಳಿದರು ಅಂತ ರೈತ ಯೋಚಿಸಿದ. ತಿಳಿಯದೆ ಸಾಯಿಬಾಬಾರತ್ತ ಹಿಂದಿರುಗಿದ.
ಬಾಬಾ ನೀವೇನು ಯೋಚಿಸಬೇಡಿ. ನನ್ನ ಹೊಲಕ್ಕೇನು ಬೆಂಕಿ ತಗುಲಿಲ್ಲ ಎಂದ ಆ ರೈತ. ಬಾಬಾ ಮತ್ತೇ ಹೇಳಿದರು “ಹೋಗು ಬೇಗ. ನಿನ್ನ ಹೊಲಕ್ಕೆ ಬೆಂಕಿ ತಗುಲಿದೆ! ಕೂಡಲೇ ಹೋಗಿ ದಿವಸ ಧಾನ್ಯಗಳನ್ನು ರಕ್ಷಿಸು”.
ಬಾಬಾರ ಮಾತು ಕೇಳಿದ ರೈತ ಮತ್ತೆ ಹೊಲದತ್ತ ಹೋದ. ಬಾಬಾ ಹೇಳಿದ ಮಾತು ದಿಟ್ಟವಾಗಿತ್ತು. ರೈತನ ಹೊಲಕ್ಕೆ ಬೆಂಕಿ ಹತ್ತಿಕೊಂಡಿತ್ತು. ಬೆಳೆದ ಬೆಳೆಯೆಲ್ಲವೂ ನಾಶವಾಗುವ ಹಂತದಲ್ಲಿತ್ತು. ರೈತ ಸಹಾಯಕ್ಕಾಗಿ ಕೂಗಿಕೊಂಡ.
ಅಕ್ಕಪಕ್ಕದ ಹೊಲದವರು ಓಡೋಡಿ ಬಂದರು. ನೀರು ಎರಚಿದರೂ ಪ್ರಯೋಜನವಾಗಲಿಲ್ಲ. ಬೆಂಕಿ ಆರಲಿಲ್ಲ. ಆಗ ರೈತನಿಗೆ ಬಾಬಾರ ನೆನಪಾಯಿತು. ಬಾಬಾರ ಕೃಪೆಯಿಂದ ಮಾತ್ರವೇ ತನ್ನ ಹೊಲ, ಬೆಳೆ ಉಳಿಯುತ್ತದೆ ಎಂದು ಭಾವಿಸಿದ. ಹಿಂದಿರುಗಿ ಹೋಗಿ ಸಾಯಿಬಾಬಾರ ಪಾದಕ್ಕೆ ಎರಗಿದ. ನೀವೇ ನನ್ನನ್ನು ಕಾಪಾಡಬೇಕು ಎಂದು ಬೇಡಿಕೊಂಡ.
ರೈತನ ಮಾತಿಗೆ ಸಾಯಿಬಾಬಾ ಒಪ್ಪಿದರು. ಆತನ ಹೊಲದತ್ತ ಹೋಗಿ ಬೆಂಕಿಯ ಮೇಳೆ ಸ್ವಲ್ಪ ನೀರು ಚಿಮುಕಿಸಿದರು. ಬೆಂಕಿಯನ್ನು ಉದ್ದೇಶಿಸಿ “ನೀನೇನು ಮಾಡುತ್ತಿದ್ದಿಯ. ಮೊದಲೇ ಈತ ಬಡವ. ಇವನ ಬೆಳೆಯನ್ನು ಸುಟ್ಟರೆ ಅವನ ಗತಿಯೇನು?” ಎಂದರು. ಬಾಬಾರ ಸೂಚನೆಗೆ ಬೆಂಕಿ ಮಣಿಯಿತು. ಕೂಡಲೇ ನಂದಿತು. ಇದು ಪವಾಡವಲ್ಲದೇ ಮತ್ತೇನು?
ಕೃಪೆ; ಬೋಧಿವೃಕ್ಷ