ದೊಡ್ಡಬಳ್ಳಾಪುರ, (ಸೆ.20): ನಗರದ ಪ್ರತಿಷ್ಠಿತ ಶಾಲೆಯಾದ ನಳಂದ ಪ್ರೌಢಶಾಲೆಯಲ್ಲಿ ಇಂದು ನಗರ ಪೊಲೀಸ್ ಠಾಣೆಯಿಂದ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಠಾಣೆಯ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಶಾಲಾ ವಿದ್ಯಾರ್ಥಿಗಳಿಗೆ ಸಂಚಾರ ಮತ್ತು ಸುರಕ್ಷತೆಯ ನಿಯಮಗಳನ್ನು ಸರಳವಾಗಿ ತಿಳಿಸಿಕೊಟ್ಟರು.
ಈ ವೇಳೆ ಬೈಕ್‌ನಲ್ಲಿ ಸಾಗುವ ವೇಳೆ ಹೆಲ್ಮೆಟ್ ಧರಿಸುವುದು, ಕಾರಲ್ಲಿ ಸಾಗುವ ವೇಳೆ ಸೀಟ್ ಬೆಲ್ಟ್‌ಗಳನ್ನು ಧರಿಸುವುದರ ಮಹತ್ವವನ್ನು ಹೇಳಿದರು.
ಅಲ್ಲದೆ ಇತ್ತೀಚೆಗೆ ಕಂಡುಬರುತ್ತಿರುವ ತ್ರಿ ಸವಾರಿ, ವೀಲ್ಹಿಂಗ್, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಇತ್ಯಾದಿ ಪಿಡುಗುಗಳಿಂದ ಉಂಟಾಗುವ ಅಪಾಯದ ಕುರಿತು ಶಾಲಾ ಮಕ್ಕಳಿಗೆ ಉದಾಹರಣೆ ಸಹಿತ ವಿವರಿಸಿದರು.
ಇದೇ ವೇಳೆ ನೂತನವಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ ಬಗ್ಗೆಯೂ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಮುಕ್ತ ಸಂಭಾಷಣೆ ನಡೆಸುತ್ತಾ, ಮಕ್ಕಳ ಅನೇಕ ಪ್ರಶ್ನೆಗಳಿಗೆ ಪರಿಹಾರವನ್ನು ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುನೀತಾ ಪಿ., ಹಿರಿಯ ಶಿಕ್ಷಕ ನಾರಾಯಣಸ್ವಾಮಿ ಪಿ., ಪೊಲೀಸ್ ಸಿಬ್ಬಂದಿಗಳಾದ ರೂಪೇಶ್ ಯಾದವ್, ನಾಗರಾಜು, ಹರೀಶ್ ಹಾಗೂ ಶಿಕ್ಷಕ ವರ್ಗ ಇದ್ದರು.