ದೊಡ್ಡಬಳ್ಳಾಪುರ, (ಸೆ.19); ಬುಧವಾರ ರಾತ್ರಿ ನಗರದ ತೇರಿನಬೀದಿ ವಿಶ್ವೇಶ್ವರಯ್ಯ ವೃತ್ತದ ಬಳಿಯಲ್ಲಿ ಜನತೆ ಮಳೆಗಾಗಿ ಪ್ರಾರ್ಥಿಸಿ, ಮಳೆರಾಯನನ್ನು ಪೂಜಿಸುವ ಆಚರಣೆ ಮಾಡಲಾಯಿತು.
ಮೂರು ದಿನಗಳ ಈ ಆಚರಣೆಯಲ್ಲಿ ಮಳೆರಾಯನ ಮಣ್ಣಿನ ಮೂರ್ತಿಯನ್ನು ಮಾಡಿ, ಪೂಜೆ ಸಲ್ಲಿಸಲಾಯಿತು.
ಮೂರ್ತಿಯನ್ನು ಹೊತ್ತ ಯುವಕರು ಹೂಯ್ಯೋ ಹೋಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆತೋಟಕೆ ನೀರಿಲ್ಲ. ಮಳೆರಾಯ ಕೃಪೆ ತೋರು ಎಂದು ಹಾಡುತ್ತಾ ಮನೆ ಮನೆಗೆ ತೆರಳಿ ಮಳೆರಾಯನನ್ನು ಪೂಜಿಸಿ ಕುಂಭಾಭಿಷೇಕ ಮಾಡಿದರು.
ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್‌ರ 74ನೇ ಜನ್ಮದಿನ: ದೊಡ್ಡಬಳ್ಳಾಪುರದಲ್ಲಿ ಅನ್ನ ಸಂತರ್ಪಣೆ
ಗರುವುಗಲ್ಲಿಗೆ ಕುಂಭಾಭಿಷೇಕ; ಮೂರು ದಿನಗಳ ಈ ಆಚರಣೆಯಲ್ಲಿ ಮಳೆರಾಯನ ಮಣ್ಣಿನ ಮೂರ್ತಿಯನ್ನು ಮಾಡಿ, ಮೂರ್ತಿಯನ್ನು ಹೊತ್ತ ಯುವಕರು ಮನೆ ಮನೆಗೆ ತೆರಳಿ ಮಳೆರಾಯನಿಗೆ ಪೂಜೆ ಮಾಡಿಸುವುದು ಒಂದು ಭಾಗವಾದರೆ, ಮತ್ತೊಂದು ದಿನ ನಗರದ ಕಾಲೇಜು ರಸ್ತೆಯಲ್ಲಿನ ಬಯಲು ಬಸವಣ್ಣನಿಗೆ 101 ಕುಂಭಗಳ ಅಭಿಷೇಕ ಮಾಡಿ ಪೂಜಿಸುವುದು ಮತ್ತು ಇದೇ ದಿನ ತೇರಿನಬೀದಿ ವಿಶ್ವೇಶ್ವರಯ್ಯ ವೃತ್ತದ ಬಳಿಯಲ್ಲಿನ ಗರುವುಗಲ್ಲಿಗೆ ಕುಂಭಾಭಿಷೇಕ ಮಾಡುವುದು ಸಂಪ್ರದಾಯವಾಗಿದೆ.
ಈ ಬಾರಿ ಸಹ ಮಳೆಯಿಲ್ಲದೇ ನೀರಿನ ಅಭಾವ ಕಾಣುತ್ತಿದೆ. ರಾಸುಗಳಿಗೆ ಈಗಲೂ ಮೇವಿನ ಕೊರತೆಯಿದೆ. ಆದ್ದರಿಂದ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ದಶಕಗಳಿಂದಲೂ ಮಳೆರಾಯನನ್ನು ಆರಾಸುವ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಈ ಬಾರಿ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ್, ಯಲ್ಲಪ್ಪ.