ದೊಡ್ಡಬಳ್ಳಾಪುರ, (ಸೆ.19); ಜಮೀನಿನಲ್ಲಿ ಬೆಳೆ ಸರ್ವೆ ಮಾಡಲು ಹೋಗಿದ್ದ ಗ್ರಾಮ ಲೆಕ್ಕಾಧಿಕಾರಿಯ ಮೇಲೆ ಜಮೀನು ಮಾಲೀಕರು ಹಲ್ಲೆ ಮಾಡಿರುವ ಘಟನೆ ನಗರದ ಖಾಸ್ ಬಾಗ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕಸಬಾ ಹೋಬಳಿ ಖಾಸಬಾಗ್ ಗ್ರಾಮದಲ್ಲಿ ಎಂದಿನಂತೆ ಕಸಬಾ ಗ್ರಾಮ ಲೆಕ್ಕಾಧಿಕಾರಿ ಎಚ್.ಎಸ್.ರಾಜೇಂದ್ರ ಬಾಬು ಜಮೀನಲ್ಲಿ ಫೋಟೊ ತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದ ವೇಳೆ ಏಕಾಏಕಿ ಬಂದ ವಸಂತ್ ಕುಮಾರ್ ಎಂಬಾತ ಜಮೀನಿನಲ್ಲಿ ಬಿದ್ದಿದ್ದ ತೆಂಗಿನಪಟ್ಟೆಯನ್ನು ತೆಗೆದುಕೊಂಡು ತಲೆ ಮತ್ತು ಕೈ ಭಾಗಕ್ಕೆ ಹಲ್ಲೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಗ್ರಾಮ ಲೆಕ್ಕಾಧಿಕಾರಿ ಎಚ್.ಎಸ್ ರಾಜೇಂದ್ರ ಬಾಬು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಬಳಿಕ ಆರೋಪಿ ವಸಂತ್ ಕುಮಾರ್ ನನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಗಾಯಾಳು ಎಚ್.ಎಸ್ ರಾಜೇಂದ್ರ ಬಾಬು ಆರೋಗ್ಯವನ್ನ ತಹಶೀಲ್ದಾರ್ ವಿಭಾವಿದ್ಯಾ ರಾಠೋಡ್ ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿಚಾರಿಸಿದರು.