ದೊಡ್ಡಬಳ್ಳಾಪುರ, (ಸೆ.19); ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರಶಿಕ್ಷಣಾಧಿಕಾರಿ ಸೈಯೀದಾ ಆನೀಸ್ ಅವರ ವಿರುದ್ಧ ಶಿಸ್ತು ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ CEO ಡಾ.ಅನುರಾಧ ಕೆ. ಅವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, 2024ರ ಮಾರ್ಚ್-ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-01 ರಲ್ಲಿ ಅನುತ್ತೀರ್ಣರಾದ ಸಿ ಮತ್ತು ಸಿ+ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪಲಿತಾಂಶ ಸುಧಾರಣೆಗಾಗಿ ದಿನಾಂಕ: 14-06-2024 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಪರೀಕ್ಷೆ-02ರಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳನ್ನು ತಯಾರಿಗೊಳಿಸಲು ಆಯಾ ಶಾಲೆಯ `ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ದಿನಾಂಕ: 29-05-2024 ರಿಂದ 13-06-2024ರವರೆಗೆ ನಡೆಸಲು ತಿಳಿಸಿ ಕೆಲವು ಸೂಚನೆಗಳನ್ನು ಪಾಲಿಸಲು ಸೂಚಿಸಲಾಗಿರುತ್ತದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ-02ರ ಪರೀಕ್ಷೆಗೆ ತಾಲ್ಲೂಕಿನಲ್ಲಿ 611 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಕೇವಲ 163 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿರುವುದು ಕಂಡುಬಂದಿರುತ್ತದೆ.
ಮುಂದುವರೆದು, ದಿನಾಂಕ:12-08-2024 ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ದಿನಾಂಕ:08-08-2024ರಂದು ಏರ್ಪಡಿಸಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 04 ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳ ಸಭೆಯನ್ನು ಉಲ್ಲೇಖ-02 ರನ್ವಯ ಗೂಗಲ್ ಮೀಟ್ ಮುಖಾಂತರ ದಿನಾಂಕ: 09-08-2024 ರಂದು ವಿಡಿಯೋ ಸಂವಾದವನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಈ ಸಭೆಯ ಸಂವಾದದಲ್ಲಿ 10ನೇ ತರಗತಿಯ 2023-24ನೇ ಸಾಲಿನ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ. ಕೆಲವು ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಗಣನೀಯವಾಗಿ ಕಡಿಮೆಯಾಗಲು ಕಾರಣಗಳು ಹಾಗೂ 2024-25 ನೇ ಸಾಲಿನಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ BEO ಸೈಯಿದಾ ಅನೀಸ್ ಅವರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲೆ ವಿಭಾಗ) ದೊಡ್ಡಬಳ್ಳಾಪುರ ಟೌನ್ ಶಾಲೆಯ ಫಲಿತಾಂಶ ಮತ್ತು ಸರ್ಕಾರಿ ಪ್ರೌಢಶಾಲೆ ಕೊನಘಟ್ಟ ದೊಡ್ಡಬಳ್ಳಾಪುರ ತಾಲ್ಲೂಕು ಈ ಶಾಲೆಗಳಲ್ಲಿ 2024ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ 01 ಮತ್ತು 02 ಬಾರಿ ನಡೆದ ಪರೀಕ್ಷಾ ಫಲಿತಾಂಶವನ್ನು ಗಣನೀಯವಾಗಿ ಕಡಿಮೆಯಾಗಿದ್ದು, ಈ ಕುರಿತಂತೆ ಪ್ರಶ್ನಿಸಿದರೆ ಸರಿಯಾದ ಮಾಹಿತಿ ಹೊಂದಿರುವುದಿಲ್ಲ ಮತ್ತು ಸಭೆಯಲ್ಲಿ ಸರಿಯಾಗಿ ಮಾಹಿತಿಗಳನ್ನು ನೀಡಿರುವುದಿಲ್ಲ.
ಅಲ್ಲದೆ ಮೇಲಾಧಿಕಾರಿಗಳ ಮಹತ್ವದ ಸಭೆಗೆ ಪೂರ್ವ ಸಿದ್ಧತೆ ಇಲ್ಲದೇ ಹಾಜರಾಗಿರುವುದು ಹಾಗೂ ಪರೀಕ್ಷೆ-1ರ ಫಲಿತಾಂಶವು ಶೇ.83.13ರಷ್ಟಿದ್ದು, ನಂತರ ಪರೀಕ್ಷೆ-2ರ ಫಲಿತಾಂಶವು ಶೇ.26.68ರಷ್ಟು ಇಳಿದಿರುವುದು ಕಂಡುಬಂದಿರುತ್ತದೆ.
ಈ ಫಲಿತಾಂಶದ ಕುರಿತಂತೆ ಶಾಲಾವಾರು, ವಿಷಯವಾರು ಮಾಹಿತಿಯನ್ನು ಹೊಂದಿರುವುದಿಲ್ಲ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಗೊಳಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಹ ಸಮರ್ಪಕವಾಗಿ ಉತ್ತರಿಸಿರುವುದಿಲ್ಲ.
ಇಂತಹ ಇವರ ಧೋರಣೆಯು ಕರ್ತವ್ಯನಿರ್ಲಕ್ಷತೆ ಮತ್ತು ಕರ್ತವ್ಯಲೋಪವನ್ನು ತೋರಿಸುತ್ತಿದ್ದು, ಸದರಿಯವರು ಶೈಕ್ಷಣಿಕವಾಗಿ ತಾಲ್ಲೂಕಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವಲ್ಲಿ ಸರಿಯಾದ ಮಾರ್ಗದರ್ಶನವನ್ನು ನೀಡದೇ ಕರ್ತವ್ಯ ನಿರ್ಲಕ್ಷ್ಯತೆ ತೋರಿರುವುದು ಹಾಗೂ ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಮೆಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ BEO ಸೈಯೀದಾ ಅನೀಸ್ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.